Site icon Vistara News

Rapid Road Technology | ಗುಣಮಟ್ಟ , ಕಡಿಮೆ ವೆಚ್ಚ ಇದ್ದರೆ ಮಾತ್ರ ರ‍್ಯಾಪಿಡ್‌ ರಸ್ತೆ ತಂತ್ರಜ್ಞಾನ ಪರಿಗಣನೆ: ಸಿಎಂ ಬೊಮ್ಮಾಯಿ

Rapid Road Technology

ಬೆಂಗಳೂರು: ಗುಣಮಟ್ಟ ಹಾಗೂ ದರಗಳನ್ನು ಪರಿಶೀಲಿಸಿದ ನಂತರವೇ ಪ್ರಿಕಾಸ್ಟ್ ತಂತ್ರಜ್ಞಾನ ಬಳಸಿ ನಿರ್ಮಿಸುವ ರ‍್ಯಾಪಿಡ್‌ ರಸ್ತೆಗಳನ್ನು (Rapid Road Technology) ಪರಿಗಣಿಸಲಾಗುವುದು. ಉತ್ತಮ ರಸ್ತೆಗಳ ಜತೆಗೆ ವೆಚ್ಚವೂ ಕಡಿಮೆಯಿರುವುದು ಬಹಳ ಮುಖ್ಯ. ಈ ಕುರಿತು ವರದಿಗಳು ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಪ್ರಾಯೋಗಿಕವಾಗಿ ನಿರ್ಮಿಸಿರುವ ರ‍್ಯಾಪಿಡ್‌ ರಸ್ತೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ವೈಟ್ ಟಾಪಿಂಗ್ ಮಾಡುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸಂಚಾರ ವ್ಯವಸ್ಥೆ ಬದಲಾವಣೆ, ಸಂಚಾರ ದಟ್ಟಣೆಯಾಗುವುದು ಹೆಚ್ಚು. ಒಂದು ಬಾರಿ ವೈಟ್ ಟಾಪಿಂಗ್ ಆದ ನಂತರ ಸಮಸ್ಯೆ ಉಂಟಾದಲ್ಲಿ ಪುನಃ ಅದನ್ನು ಒಡೆದು ತೆಗೆಯುವುದು ಕಷ್ಟದ ಕೆಲಸ. ಅದಕ್ಕೆಂದೇ ರ‍್ಯಾಪಿಡ್‌ ರಸ್ತೆ ತಂತ್ರಜ್ಞಾನ ಬಂದಿದೆ. ಈ ತಂತ್ರಜ್ಞಾನದೊಂದಿಗೆ ಪ್ರಿ ಕಾಸ್ಟ್ ಸ್ಲ್ಯಾಬ್‌ಗಳನ್ನು ಜೋಡಿಸುವ ಮೂಲಕ ನಿರ್ಮಿಸಿರುವ 500 ಮೀ. ರಸ್ತೆ ಪೈಕಿ 375 ಮೀಟರ್ ಉದ್ದದ ರಸ್ತೆ ಪ್ರಾಯೋಗಿಕವಾಗಿ ನಿರ್ಮಾಣವಾಗಿದೆ. ಅದನ್ನು ಪರಿಶೀಲಿಸಿ, ಹಲವು ಸಲಹೆ ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ | Gujarat Election results | ಗುಜರಾತ್‌ನಲ್ಲಿ ಬಿಜೆಪಿಯ ಐತಿಹಾಸಿಕ ವಿಜಯಕ್ಕೆ ಆಪ್‌ ಕಾರಣವಾಯಿತೇ?

ಈ ರಸ್ತೆಯಲ್ಲಿ 20 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳನ್ನು ಸತತವಾಗಿ ಸಂಚಾರ ಮಾಡಿಸಿ, ವಿಶ್ಲೇಷಣೆ ಮಾಡಬೇಕಿದೆ. ಭಾರಿ ವಾಹನಗಳ ಚಲನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಬೇಕೆಂದು ಸೂಚಿಸಿದ್ದೇನೆ. ಇಲ್ಲಿಯ ಜಾಯಿಂಟ್‌ಗಳು, ಟೆನ್ಸಾಯಿಲ್ ಶಕ್ತಿ ಏನಿದೆ, ತಾಂತ್ರಿಕ ವಿವರಗಳನ್ನು ಸಲ್ಲಿಸಲು ಸೂಚಿಸಿದ್ದು, ಅಂತಿಮವಾಗಿ ಕಾಮಗಾರಿಯು ಕ್ಷಿಪ್ರವಾಗಿ ಆಗಬೇಕು, ಗುಣಮಟ್ಟವಿರಬೇಕು ಹಾಗೂ ವೆಚ್ಚವೂ ಸೂಕ್ತವಾಗಿರಬೇಕು ಎಂದು ಸೂಚಿಸಿದ್ದೇನೆ ಎಂದರು.

ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ, ಬೆಂಗಳೂರಿನಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್, ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಇದನ್ನು ಅಳವಡಿಸಬಹುದು ಎಂದರು.

ಈ ರಸ್ತೆಗಳಿಗೆ ವೈಟ್ ಟಾಪಿಂಗ್‌ಗಿಂತ ಶೇ.30 ರಷ್ಟು ಹೆಚ್ಚು ವೆಚ್ಚವಾಗುವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ವೆಚ್ಚವನ್ನು ಕಡಿತಗೊಳಿಸಬೇಕು. ನಮ್ಮ ಎಸ್.ಆರ್.ದರಗಳಿಗೆ ಹೊಂದುವಂತಿದ್ದರೆ ಮಾತ್ರ ಇದನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿರುವುದಾಗಿ ಹೇಳಿದರು.

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಶಾಸಕ ಎಸ್.ರಘು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Election Result 2022 | ಗುಜರಾತ್‌, ಹಿಮಾಚಲ ಚುನಾವಣೆ ಬಗ್ಗೆ ಎಕ್ಸಿಟ್‌ ಪೋಲ್ ಹೇಳಿದ್ದೇನು? ಜನರ ತೀರ್ಪೇನು?

Exit mobile version