Site icon Vistara News

The Art of Living: ಯೋಗದಿಂದ ವಿಶಾಲ ದೃಷ್ಟಿ, ಕರುಣೆ, ಬದ್ಧತೆ ಸಿಗುತ್ತದೆ: ರವಿಶಂಕರ್‌ ಗುರೂಜಿ

art of living

ಬೆಂಗಳೂರು: ನಗರದ ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆರ್ಟ್‌ ಆಫ್‌ ಲಿಂವಿಂಗ್‌ (The Art of Living) ಮತ್ತು ಇಂಡಿಯನ್‌ ಯೋಗ ಅಸೋಸಿಯೇಷನ್ (IYA) ವತಿಯಿಂದ ಫೆಬ್ರವರಿ 24ರಿಂದ 26ರವರೆಗೆ ಯೋಗದ ನಿಯಮಗಳು ಹಾಗೂ ಸಂಶೋಧನೆಯ ಕುರಿತು ಎರಡನೇ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು. ಯೋಗದ ಮೇಲೆ ವೈಜ್ಞಾನಿಕ ಸಂಶೋಧನೆಯ ಪಾತ್ರ, ಅದು ಪಡೆದುಕೊಳ್ಳಬೇಕಾದ ದಿಸೆ, ಯೋಗದ ಸುಸ್ಥಿರ ಬೆಳವಣಿಗೆ, ಯೋಗದ ಪ್ರಾಚೀನ ಜ್ಞಾನವನ್ನು ಭಾರತ ಹಾಗೂ ಜಗತ್ತಿನಲ್ಲಿ ಯಾವ ರೀತಿಯಾಗಿ ಬೋಧಿಸಲ್ಪಡುತ್ತಿದೆ ಎಂದು ಈ ಸಮಾವೇಶದಲ್ಲಿ ಚರ್ಚಿಸಲಾಯಿತು.

ಈ ಸಮಾವೇಶದಲ್ಲಿ 25 ರಾಜ್ಯಗಳ ಯೋಗದ ಕೌನ್ಸಿಲ್‌ನ ಸದಸ್ಯರು, ಸಂಶೋಧಕರು, ಯೋಗ ತಜ್ಞರು ಭಾಗವಹಿಸಿದ್ದರು. ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರು ಮಾತನಾಡಿ “ನಮ್ಮ ಯೋಗದ ಪರಂಪರೆಯ ಸಾರದ ಶುದ್ಧತೆಯನ್ನು ಕಾಯ್ದುಕೊಂಡು ಬರಬೇಕು. ಅದನ್ನು ಅಕ್ಷುಣ್ಯವಾಗಿ ಇಡಬೇಕು ಎಂದು ತಿಳಿಸಿದರು.

ಜೀವನದಲ್ಲಿ ಮೂರು ʼಸಿʼ ಗಳನ್ನು ಹೊಂದಬೇಕು. ಮೊದಲನೆಯ ಸಿ- ಕಾನ್ಟೆಕ್ಸ್ಟ್ ಟು ಲೈಫ್- ಜೀವನದ ಬಗ್ಗೆ ವಿಶಾಲವಾದ ದೃಷ್ಟಿಯನ್ನು ಹೊಂದಿದಾಗ ಸಣ್ಣ ಮನಸ್ಸು ಒಬ್ಬರನ್ನು ಕಾಡುವುದಿಲ್ಲ, ಎರಡನೆಯ ಸಿ- ಕರುಣೆ. ನಮ್ಮ ಮೇಲೆ ಹಾಗೂ ಇತರರ ಮೇಲೆ ಕರುಣೆ, ಮೂರನೇ ಸಿ- ಜೀವನದಲ್ಲಿ ಬದ್ಧತೆ. ಈ ಮೂರೂ ಯೋಗದಿಂದ ಸಿಗುತ್ತವೆ” ಎಂದರು.

ಇದನ್ನೂ ಓದಿ | Raja Marga Column : ಬದುಕಿನ ಅಗ್ನಿ ಪರೀಕ್ಷೆಗಳೇ ನಮ್ಮನ್ನು ಸ್ಟ್ರಾಂಗ್‌ ಮಾಡೋ ಶಕ್ತಿಗಳು

ಐವೈಎಯ ಅಧ್ಯಕ್ಷರಾದ, ಬಹಳ ಹಳೆಯ ಯೋಗಶಾಲೆಯಾದ ದಿ ಯೋಗ ಇನ್ಸ್ಟಿಟ್ಯೂಟ್‌ನ ಸಂಸ್ಥಾಪಕರಾದ ಹನ್ಸರವರು ಮಾತನಾಡಿ, “ಮೂರು ಎಚ್‌ಗಳನ್ನು ಪಾಲಿಸಿ. ಕಷ್ಟಪಟ್ಟು ಕೆಲಸ ಮಾಡಿ. ಎರಡನೆಯ ಎಚ್- ತಲೆ. ನಮ್ಮ ತಲೆ ಸರಿಯಾಗಿರಬೇಕು. ಮೂರನೆಯ ಎಚ್ – ಹೃದಯ. ಹೃದಯವು ತಲೆ ಮೇಲೆ ಕೈಯೊಡನೆ ನಡೆಯಬೇಕು. ಸಮಗ್ರವಾದ ಜೀವನವನ್ನು ನಡೆಸಬೇಕು” ಎಂದರು.

ಆಚಾರ್ಯ ಲೋಕೇಶ್ ಮುನಿ ಮಾತನಾಡಿ” ಮಾನಸಿಕ ಶಾಂತಿಯಿಲ್ಲದೆ ವಿಶ್ವ ಶಾಂತಿ ಸಾಧ್ಯವಿಲ್ಲ. ವಿಶ್ವಶಾಂತಿಯು ಯೋಗದಿಂದ ಬರುತ್ತದೆ” ಎಂದರು. ಡಾ. ಬಸವರೆಡ್ಡಿಯವರು ಅವರು,” ಯೋಗವು ದೇಹ, ಮನಸ್ಸಿನ ಜ್ಞಾನವನ್ನು ನೀಡುತ್ತದೆ ಮತ್ತು ಇವುಗಳನ್ನು ಐಕ್ಯವಾಗಿಸುವ ದಾರಿಯನ್ನು ಯೋಗ ತೋರಿಸುತ್ತದೆ. ಅಂತಿಮವಾಗಿ ಇದು ಪ್ರಕೃತಿಯ ಎಲ್ಲವನ್ನೂ ಐಕ್ಯವಾಗಿಸುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಯೋಗ ಅನುಸಂಧಾನ ಕೇಂದ್ರದ ಸಂಸ್ಥಾಪಕ, ಪದ್ಮಶ್ರೀ ಡಾ. ಎಚ್. ಆರ್. ನಾಗೇಂದ್ರ, ಕೈವಲ್ಯಧಾಮ ಸಿಇಒ ಹಾಗೂ ಐವೈಎಯ ಜೆನರಲ್ ಸೆಕ್ರೆಟರಿ ಸುಬೋಧ್ ತಿವಾರಿ, ಐವೈಎ ಜಂಟಿ ಕಾರ್ಯದರ್ಶಿ ಡಾ. ಆನಂದ್ ಬಾಲಯೋಗಿ, ಸಂಸ್ಕೃತಿ ವಿಶ್ವವಿದ್ಯಾಲಯದ ಡಾ. ಎಸ್.ಪಿ. ಮಿಶ್ರ ದೇವ್, ಹರಿದ್ವಾರದ ಗಾಯತ್ರಿ ಕುಂಜ್ ಹಾಗೂ ಐವೈಎ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಶ್ರೀ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‌ಡ್ ಸ್ಟಡೀಸ್ ಹಾಗೂ ಶ್ರೀ ಬಾಲಾಜಿ ವಿದ್ಯಾಪೀಠ, ಡೀಮ್ಡ್ ಟು ಬಿ ವಿಶ್ಶವಿದ್ಯಾಲಯ, ಪುದುಚೇರಿ ಜತೆ ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ವೈದ್ಯಕೀಯ ಹಿನ್ನೆಲೆಯಲ್ಲಿ ಯೋಗ, ಧ್ಯಾನ, ಸಂಗೀತ ಹಾಗೂ ಮಂತ್ರೋಚ್ಚಾರಣೆಯ ಬಗ್ಗೆ ಸಂಶೋಧನೆ ನಡೆಯಲಿದೆ.

ಇದನ್ನೂ ಓದಿ | Raja Marga Column : ನಾವು ಬೆಳೆಯಬೇಕಾಗಿರುವುದು ಹೊರಗಿನಿಂದ ಅಲ್ಲ, ಒಳಗಿನಿಂದ! ಇಲ್ಲಿದೆ 12 ಸೂತ್ರ

ಶ್ರೀ ಶ್ರೀ ಯೋಗ ಶಾಲೆಯು ಆರ್ಟ್ ಆಫ್ ಲಿವಿಂಗ್‌ನ ಸಂಶೋಧನ ಕೇಂದ್ರದೊಡನೆ ಹಾಗೂ ಐಐಟಿ , ಚೈನ್ನೈಯೊಡನೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಡಿಜಿಟಲ್ ತಂತ್ರಜ್ಞಾನದೊಡನೆ ಯೋಗದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಸಂಶೋಧನೆ ನಡೆಯಲಿದೆ. ಟಾಟಾ ಕನ್ಸೆಲ್‌ಟೆನ್ಸಿ ಹಾಗೂ ಐವೈಎ ಒಡಂಬಡಿಕೆಯು, ಐವೈಎಯ ಸದಸ್ಯ ಸಂಸ್ಥೆಗಳು ಸಂಶೋಧನೆಯನ್ನು ಮಾಡಲಿಚ್ಛಿಸುವ ವಿಷಯಗಳ ಬಗ್ಗೆ ಟಿಸಿಎಸ್ ಬೆಂಬಲವನ್ನು ನೀಡುವುದರ ಕುರಿತಾಗಿದೆ.

Exit mobile version