ಬೆಂಗಳೂರು: ಕುಡಿದ ಮತ್ತಿನಲ್ಲಿ (drunk and drive) ಅತಿ ವೇಗದಿಂದ ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ (Road accident) ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ರಾಜಧಾನಿಯ ಆರ್ಎಂಸಿ ಯಾರ್ಡ್ ಬಳಿ ಘಟನೆ ನಡೆದಿದೆ. ಮೃತಪಟ್ಟವರನ್ನು ಮನಮೋಹನ್ (31) ನಿಖಿಲ್( 25) ಎಂದು ಗುರುತಿಸಲಾಗಿದೆ. ಮುಂಜಾನೆ 3.30ರ ಸಮಯದಲ್ಲಿ ದುರ್ಘಟನೆ ನಡೆದಿದೆ.
ಯುವಕರು ಬಿಎಂಡಬ್ಲ್ಯೂ ಬೈಕ್ ಚಲಾಯಿಸುತ್ತಿದ್ದರು. ಯಶವಂತಪುರದಿಂದ ಆರ್ಎಮ್ಸಿ ಯಾರ್ಡ್ ರೋಡ್ ಕಡೆ ಡ್ರೈವ್ ಮಾಡುತ್ತಿದ್ದ ಇವರು ಮದ್ಯ ಸೇವಿಸಿದ್ದರು ಹಾಗೂ ಅತಿವೇಗದಿಂದ ಚಾಲನೆ ಮಾಡಿದ್ದುದು ಗೊತ್ತಾಗಿದೆ. ಇಬ್ಬರೂ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ಮನಮೋಹನ್, ನಿಖಿಲ್ ವಾಪಸ್ ಬರುತ್ತಿದ್ದರು.
ವೇಗದಿಂದಾಗಿ ನಿಯಂತ್ರಣ ಸಿಗದೆ ಬೈಕ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರೂ ಬೈಕ್ನಿಂದ ದೂರಕ್ಕೆ ಹಾರಿಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮನಮೋಹನ್ ಬನಶಂಕರಿ ನಿವಾಸಿ ಎಂಬ ಮಾಹಿತಿ ದೊರೆತಿದೆ. ಇಬ್ಬರ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಿಪ್ಪರ್ ಹರಿದು ಆಟೋ ಚಾಲಕ ಸಾವು
ಕೋಲಾರ: ಆಟೋ ಚಾಲಕನ ಮೇಲೆ ಟಿಪ್ಪರ್ ಹರಿದು ಚಾಲಕ ಸಾವಿಗೀಡಾದ ಘಟನೆ ಕೋಲಾರ ತಾಲೂಕಿನ ಮಡೇರಹಳ್ಳಿಯ ರಾ.ಹೆ 75ರ ಗೇಟ್ ಬಳಿ ನಡೆದಿದೆ. ಸೂಲೂರು ಗ್ರಾಮದ ನಿವಾಸಿಯಾದ ಧನುಷ್ (29) ಮೃತ ಚಾಲಕ.
ರಿಕ್ಷಾಗೆ ಟಿಪ್ಪರ್ ಹಿಂಬದಿಯಿಂದ ಡಿಕ್ಕಿ ಹೊಡೆದು, ಚಾಲಕನ ಮೇಲೆ ಹರಿದಿದೆ. ರಸ್ತೆಯ ಮೇಲೆಯೇ ಮೃತ ಚಾಲಕನ ದೇಹ ನಜ್ಜು ಗುಜ್ಜಾಗಿದೆ. ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Hit and Run: ಡಿಕ್ಕಿ ಹೊಡೆದು ಕಾರು ಪರಾರಿ, ಯುವಕ ಸ್ಥಳದಲ್ಲೇ ಸಾವು