ರಾಯಚೂರು: ರಾಯಚೂರು ತಾಲೂಕಿನ ಕಸ್ಬೆ ಕ್ಯಾಂಪ್ ಬಳಿ ಕಾರು ಅಪಘಾತ (Road accident) ಸಂಭವಿಸಿದ್ದು, ಕ್ರೆಟಾ ಕಾರು ಪಲ್ಟಿಯಾದ (Car accident) ಪರಿಣಾಮ ಚಾಲಕ ಮೃತಪಟ್ಟಿದ್ದಾರೆ.
ತಿರುವಿನಲ್ಲಿ ಆಯತಪ್ಪಿ ಪಲ್ಟಿಯಾದುದರಿಂದ ಕ್ರೆಟಾ ಕಾರು ಚಲಾಯಿಸುತ್ತಿದ್ದ ಸಲೀಂ (34) ಎಂಬವರು ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಂಧನೂರಿನಿಂದ ರಾಯಚೂರಿಗೆ ಬರುವಾಗ ಅವಘಡ ಸಂಭವಿಸಿದೆ. ತಿರುವಿನಲ್ಲಿ ಅತಿವೇಗವಾಗಿ ಚಲಾಯಿಸಿದ್ದರಿಂದ ಬ್ಯಾಲೆನ್ಸ್ ಸಿಗದೇ ಕಾರು ಪಲ್ಟಿಯಾಗಿದೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಗಾಯ, ಟ್ಯಾಂಕರ್ ಚಾಲಕ ಬಂಧನ
ಬೆಂಗಳೂರು: ವಿದ್ಯುತ್ ಕಂಬ ಬಿದ್ದು ಕಾಲೇಜು ವಿದ್ಯಾರ್ಥಿನಿಯೊಬ್ಬರು ಗಾಯಗೊಂಡ ಪ್ರಕರಣದಲ್ಲಿ ವಾಟರ್ ಟ್ಯಾಂಕರ್ ಚಾಲಕ ಸುನೀಲ್ ಎಂಬಾತನನ್ನು ಬಂಧಿಸಲಾಗಿದೆ. ಸುದ್ದಗುಂಟೆಪಾಳ್ಯದಲ್ಲಿ ನಿನ್ನೆ ಅವಘಡ ನಡೆದಿತ್ತು. ವಾಹನಕ್ಕೆ ಕೇಬಲ್ ಸಿಕ್ಕಿಕೊಂಡಿದ್ದು, ಅದರೊಂದಿಗೆ ಕಂಬ ಸಹ ಕೆಳಗೆ ಬಂದಿತ್ತು. ಘಟನೆ ತನ್ನಿಂದಾದರೂ ತಿಳಿಯದಂತೆ ಕೇರ್ ಮಾಡದ ಚಾಲಕ ಸುನಿಲ್ ವಾಹನ ನಿಲ್ಲಿಸದೇ ಸ್ಥಳದಿಂದ ತೆರಳಿದ್ದ. ಮೈಕೋಲೇಔಟ್ ಸಂಚಾರಿ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿ, ಈ ವೇಳೆ ಸಿಕ್ಕ ಗಾಡಿ ನಂಬರ್ ಆಧರಿಸಿ ಚಾಲಕನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಸಂಪ್ ಸ್ವಚ್ಛಗೊಳಿಸುವ ವೇಳೆ ಕರೆಂಟ್ ಶಾಕ್ ಹೊಡೆದು ಸಾವು
ಬೆಂಗಳೂರು: ಮನೆಯೊಂದರ ಸಂಪ್ ಸ್ವಚ್ಛಗೊಳಿಸುವ ವೇಳೆಯಲ್ಲಿ ಕರೆಂಟ್ ಶಾಕ್ ಹೊಡೆದು ಕಾರ್ಮಿಕ ಸಾವಿಗೀಡಾದ ಘಟನೆ ಜಯನಗರದ 4ನೇ ಬ್ಲಾಕ್‌ನಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಈ ದುರಂತ ಸಂಭವಿಸಿದ್ದು, ಆದಿನಾರಾಯಣ್ ನಾಯ್ಕ್ (44) ಎಂಬವರು ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ ಸಂತೋಷ್ ಎಂಬವರ ಬಿಲ್ಡಿಂಗ್‌ನಲ್ಲಿ ಸಂಪ್ ಕ್ಲೀನ್ ಮಾಡಲು ಆದಿನಾರಾಯಣ್ ನಾಯ್ಕ ಹೋಗಿದ್ದರು. ಕಂಟ್ರಾಕ್ಟರ್ ಚಂದ್ರು ಎಂಬವರ ಮೂಲಕ ಸಂಪ್ ಸ್ವಚ್ಛಗೊಳಿಸಲು ಇವರು ಒಪ್ಪಿಕೊಂಡಿದ್ದರು.
ಈ ವೇಳೆ ಮಾಲೀಕ ಮೋಟಾರ್ ಆಫ್ ಮಾಡದೆ ಸಂಪ್ ಸ್ವಚ್ಛಗೊಳಿಸಲು ತಿಳಿಸಿ ಹೋಗಿದ್ದರು. ಸಂಪ್ ಒಳಗೆ ಇಳಿದು ಸ್ವಚ್ಛಗೊಳಿಸುವಾಗ ಅದರಲ್ಲಿದ್ದ ನೀರಿನಲ್ಲಿ ಕರೆಂಟ್ ಪ್ರಹರಿಸಿ ಶಾಕ್ ಹೊಡೆದು ನಾಯ್ಕ ಒದ್ದಾಡಿದ್ದರು. ಕೂಡಲೇ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತರ ಪತ್ನಿಯಿಂದ ಬಿಲ್ಡಿಂಗ್ ಮಾಲೀಕ ಹಾಗೂ ಕಂಟ್ರಾಕ್ಟರ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Self Harming: ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿನಿ ಸಾವು