ಬೆಂಗಳೂರು/ಕೊಡಗು: ನಿಂತಿದ್ದ ಕಸದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Road Accident) ಘಟನೆ ನಡೆದಿದೆ. ಒಡಿಶಾ ಮೂಲದ ಸಾಗರ್ (23) ಮೃತ ದುರ್ದೈವಿ.
ಭಾನುವಾರ ರಾತ್ರಿ 11:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸಾಗರ್ ತನ್ನ ಸ್ನೇಹಿತರೊಟ್ಟಿಗೆ ಕಾರಿನಲ್ಲಿ ಬರುವಾಗ ರಸ್ತೆ ಬದಿ ನಿಂತಿದ್ದ ಕಸದ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಸಾಗರ್ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಇನ್ನೂ ಸಾಗರ್ ಜತೆಗೆ ಇನ್ನುಳಿದ ನಾಲ್ವರು ಟೆಕ್ಕಿಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್
ನಿನ್ನೆ ಚಿತ್ರದುರ್ಗದಲ್ಲಿ ಖಾಸಗಿ ಬಸ್ ಪಲ್ಟಿ ಪ್ರಕರಣ ಮಾಸುವ ಮುನ್ನವೇ ಕೊಡಗಿನಲ್ಲೂ ಅಂತದ್ದೇ ಘಟನೆ ನಡೆದಿದೆ. ರಾಷ್ಟೀಯ ಹೆದ್ದಾರಿ 275ರ ಮಡಿಕೇರಿ ಬಳಿಯ ಸಂಪಾಜೆ ಬಳಿ ಖಾಸಗಿ ಬಸ್ ಪಲ್ಟಿಯಾಗಿದೆ. ಗೌರಿ ಶಂಕರ ಹೆಸರಿನ ಖಾಸಗಿ ಬಸ್ ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯಕ್ಕೆ ಹೋಗುತ್ತಿತ್ತು.
ಸಂಪಾಜೆ ಬಳಿ ಬರುವಾಗ ಮುಂಜಾನೆ ಸಮಯ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಸಮೀಪದ ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ರಸ್ತೆಯಲ್ಲಿ ಅಡ್ಡಲಾಗಿ ಬಸ್ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಯಿತು. ರಾಷ್ಟೀಯ ಹೆದ್ದಾರಿ 275ರಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: Pushpa 2 Teaser: ಕಾಲ್ಗೆಜ್ಜೆ ಧರಿಸಿ ಸೀರೆಯುಟ್ಟು ಖಡಕ್ ಆಗಿ ದರ್ಶನ ಕೊಟ್ಟ ಪುಷ್ಪರಾಜ್; ತಪ್ಪದೇ ಟೀಸರ್ ನೋಡಿ!
ಮುಖಾಮುಖಿ ಡಿಕ್ಕಿಗೆ 2 ಕಾರುಗಳು ಛಿದ್ರ ಛಿದ್ರ; ಚಾಲಕ ಸ್ಪಾಟ್ ಔಟ್
ಶಿವಮೊಗ್ಗ : ಎರಡು ಕಾರುಗಳ (Car Accident) ನಡುವೆ ಭೀಕರ ಅಪಘಾತ (Road Accident) ನಡೆದಿದ್ದು, ಸ್ಥಳದಲ್ಲೇ ಕಾರು ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ಶಿವಮೊಗ್ಗ (Shivamogga News) ತಾಲೂಕಿನ ನಿದಿಗೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಶಿವಮೊಗ್ಗ ನಗರದ ಮೇಘರಾಜ್ ಮೃತ ದುರ್ದೈವಿ.
ಮೇಘರಾಜ್ ಮಾಚೇನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ ಕೆಲಸಕ್ಕೆಂದು ಕಾರಿನಲ್ಲಿ ತೆರಳುವಾಗ ಈ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮೇಘರಾಜ್ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಎರಡು ಕಾರುಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಮತ್ತೊಂದು ಕಾರಿನೊಳಗೆ ಸಿಲುಕಿದ್ದ ವ್ಯಕ್ತಿಗೂ ಗಾಯವಾಗಿದ್ದು, ಮಹಿಳೆಯರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳಿಗೆ ಸ್ಥಳೀಯರು ಅಪಚರಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಸ್ತೆ ಮಧ್ಯದಲ್ಲಿದ್ದ ಕಾರುಗಳನ್ನು ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: Murder Case : ಬಹಿರ್ದೆಸೆಗೆ ತೆರಳಿದವನ ಹತ್ಯೆ; ಯುಗಾದಿ ಅಮಾವಾಸ್ಯೆ ದಿನ ಯಾದಗಿರಿಯಲ್ಲಿ ಚಿಮ್ಮಿತ್ತು ರಕ್ತ
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದ ಖಾಸಗಿ ಬಸ್
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೊರಕೋಡು ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ, ಪೂರ್ಣಚಂದ್ರ ಖಾಸಗಿ ಬಸ್‌ವೊಂದು ಕೆರೆಗೆ ಇಳಿದಿದೆ. ಕೆರೆಯಲ್ಲಿ ನೀರು ಇಲ್ಲದ ಕಾರಣ ದೊಡ್ಡ ಅನಾವುತವೊಂದು ತಪ್ಪಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಬಸ್ ಆನವಟ್ಟಿಯಿಂದ ಸೊರಬಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಅಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ರಸ್ತೆ ತಿರುವು ಇದ್ದ ಕಾರಣ ಚಾಲಕ ನಿಯಂತ್ರಣ ತಪ್ಪಿದ್ದು, ನೇರವಾಗಿ ಕೆರೆಗೆ ಇಳಿದಿದೆ. ಬಸ್‌ನ ಮುಂಭಾಗ ಹಾನಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ