Site icon Vistara News

Road Accident: ಬಿಎಂಡಬ್ಲ್ಯೂ ಬೈಕ್‌ನಲ್ಲಿ ವ್ಹೀಲಿಂಗ್‌: ಕಾರಿಗೆ ಡಿಕ್ಕಿ, ಸವಾರ ಸಾವು, ಇನ್ನೊಬ್ಬ ಗಂಭೀರ

bmw hit

ಬೆಂಗಳೂರು: ನಗರದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ, (Road Accident) ಕಾರಿಗೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಸಾವಿಗೀಡಾಗಿದ್ದಾರೆ. ಇನ್ನೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಯನಗರದ ಅಶೋಕ ಪಿಲ್ಲರ್ ಬಳಿ ಘಟನೆ ನಡೆದಿದೆ. ಬೈಕ್ ಸವಾರರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಬೈಕ್ (BMW bike) ಚಲಾಯಿಸುತ್ತಿದ್ದರು. ವ್ಹೀಲಿಂಗ್‌ (Bike wheeling) ಮಾಡುತ್ತ ಅತಿ ವೇಗವಾಗಿ ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಇಶು ಎಂಬ ಮೆಕ್ಯಾನಿಕ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ.

ಬೈಕ್‌ ಸವಾರರು ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ಇಶು ಸಾವಿಗೀಡಾಗಿದ್ದಾನೆ. ತೀವ್ರ ಗಾಯಗೊಂಡ ಇನ್ನೊಬ್ಬ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾರಿನ ಮುಂಭಾಗ ಹಾನಿಗೀಡಾಗಿದ್ದು, ಗಾಜು ಒಡೆದಿದೆ. ಕಾರಿನಲ್ಲಿದ್ದವರಿಗೆ ಗಾಯವಾಗಿಲ್ಲ.

ನಗರದಲ್ಲಿ ವ್ಹೀಲಿಂಗ್‌ ಹಾವಳಿ ಹೆಚ್ಚಾಗಿದ್ದು, ನಾಗರಿಕರ ಓಡಾಟಕ್ಕೂ ಆತಂಕವಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ನಾಗರಿಕರು ಪೊಲೀಸರಿಗೆ ದೂರಿದ್ದರೂ ಹಾವಳಿ ಕಡಿಮೆಯಾಗಿಲ್ಲ. ಇದೀಗ ಅಪಘಾತ ಸಂಭವಿಸಿ ಜೀವಬಲಿ ಪಡೆದಿದೆ.

ಭೀಕರ ರಸ್ತೆ ಅಪಘಾತ, ಜೀಪಿಗೆ ಲಾರಿ ಡಿಕ್ಕಿಯಾಗಿ ಐವರು ಸಾವು

ಕಲಬುರಗಿ: ಅಫಜಲಪುರ- ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 5 ಮಂದಿ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊರವಲಯದ ನೀರಾವರಿ ಕಚೇರಿ ಬಳಿ ದುರ್ಘಟನೆ ನಡೆದಿದೆ. ಲಾರಿ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಜೀಪಿನಲ್ಲಿದ್ದ ಐವರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಮೃತ ದುರ್ದೈವಿಗಳನ್ನು ಸಂತೋಷ್(40), ಶಂಕರ್(55), ಸಿದ್ದಮ್ಮ(50), ಹುಚ್ಚಪ್ಪ(5), ಪೂಜಾ(30) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಅಫಜಲಪುರ ಮಾಡ್ಯಾಳ ಗ್ರಾಮದ ನಿವಾಸಿಗಳು. ಅಫಜಲಪುರ ಕಡೆಯಿಂದ ಮಲ್ಲಾಬಾದ್ ಕಡೆ ಇವರ ಕಮಾಂಡೋ ಜೀಪ್‌ ಹೊರಟಿತ್ತು.

ಕಲಬುರಗಿ ಕಡೆಯಿಂದ‌ ವೇಗವಾಗಿ ಬರುತ್ತಿದ್ದ ಲಾರಿಗೆ ಜೀಪು ಡಿಕ್ಕಿಯಾಗಿದೆ. ಜೀಪಿನಲ್ಲಿದ್ದವರೆಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದ್ದಾರೆ.

ಇದನ್ನೂ ಓದಿ: Road Accident: ಆಟೋ ರಿಕ್ಷಾ,ಪಿಕಪ್ ನಡುವೆ ಭೀಕರ ಅಪಘಾತ; 8 ಮಂದಿ ದುರ್ಮರಣ

Exit mobile version