ಬೆಂಗಳೂರು: ಸತತ ಮಳೆಯಿಂದ ನಗರದಲ್ಲಿ ವಿವಿಧೆಡೆ ರಸ್ತೆಗಳಲ್ಲಿ ಡಾಂಬರು ಕಿತ್ತುಬಂದು ಬೃಹತ್ ಗುಂಡಿಗಳು ಸೃಷ್ಟಿಯಾಗುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ನಡುವೆ ನಗರದ ಶ್ರೀರಾಂಪುರದಲ್ಲಿ ರಸ್ತೆ ಕುಸಿದು ಬೃಹತ್ ಗುಂಡಿ ಸೃಷ್ಟಿಯಾಗಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಶ್ರೀರಾಮಪುರದ ಪ್ರಮುಖ ರಸ್ತೆಯಲ್ಲಿ ಸುಮಾರು 5-6 ಅಡಿಯಷ್ಟು ಆಳವಾಗಿ ರಸ್ತೆ ಕುಸಿದಿದ್ದು, ಸುರಂಗದ ಮಾದರಿಯಲ್ಲಿ ಗುಂಡಿ ಭಾಸವಾಗುತ್ತಿತ್ತು. ಹೀಗಾಗಿ ಸದ್ಯಕ್ಕೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬಿಬಿಎಂಪಿ ಸಿಬ್ಬಂದಿಯಿಂದ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.
ಒಂದು ವಾರದಿಂದ ರಾಜಧಾನಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಇದರಿಂದ ರಸ್ತೆಗಳಿಗೂ ಹಾನಿಯಾಗುತ್ತಿದೆ. ವಿವಿಧೆಡೆ ಗುಂಡಿಮಯ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರ ಶ್ರೀರಾಂಪುರ ಸಮೀಪದ ಓಕಳೀಪುರದ ಸುಜಾತ ಚಿತ್ರಮಂದಿರದ ಬಳಿ ಗುಂಡಿ ತಪ್ಪಿಸಲು ಹೋಗಿ ಮಹಿಳೆಯೊಬ್ಬರು ಆಯತಪ್ಪಿ ಕೆಳಗೆ ಬಿದ್ದಾಗ ಬಸ್ ಹರಿದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಹೀಗಾಗಿ ರಸ್ತೆ ಅವ್ಯವಸ್ಥೆಗೆ ಕಳಪೆ ಕಾಮಗಾರಿ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | Bengaluru Road | ಬೆಂಗಳೂರು ರಸ್ತೆಯ ಒಂದು ಗುಂಡಿ ಮುಚ್ಚಲು 10 ಸಾವಿರ ರೂಪಾಯಿ ಬೇಕಾ?