Site icon Vistara News

ಪರಿಸರ ರಕ್ಷಣೆಯ ಕಾಳಜಿ ವಹಿಸಿ : ಸಾಲು ಮರದ ತಿಮ್ಮಕ್ಕ ಕರೆ

ಸಾಲು ಮರದ ತಿಮ್ಮಕ್ಕ

ಬೆಂಗಳೂರು: ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50 X 80 ಅಳತೆಯ ನಿವೇಶನವನ್ನು ಬುಧವಾರ ನೀಡಲಾಯಿತು. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತರಾದ ರಾಜೇಶ್ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬುಧವಾರ ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ ನಲ್ಲಿರುವ ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ನಂತರ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕ ಅವರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ವಿತರಿಸಿದರು.

ಸಾಲುಮರದ ತಿಮ್ಮಕ್ಕ ಮಾತನಾಡಿ “”ನನಗೆ ಬಿಡಿಎ ವತಿಯಿಂದ ನಿವೇಶನವನ್ನು ನೀಡಿರುವುದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಲ್ಲಿ ಪರಿಸರ ಕಾಳಜಿ ಮೂಡುವಂತೆ ಮಾಡಬೇಕುʼʼ ಎಂದು ಹಾರೈಸಿದರು.

ಬಿಡಿಎ ಅಧ್ಯಕ್ಷ ವಿಶ್ವನಾಥ್ ಮಾತನಾಡಿ “”ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬಿಡಿಎ ವತಿಯಿಂದ ನಮ್ಮೆಲ್ಲರ ಮಾರ್ಗದರ್ಶಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರಿಗೆ ನಿವೇಶನ ನೀಡಿರುವುದು ಸಂತೋಷ ತಂದಿದೆʼʼ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಆನಂದ್, ಉಪ ಕಾರ್ಯದರ್ಶಿ ಡಾ. ಮಧು ಮತ್ತಿತರ ಅಧಿಕಾರಿಗಳು ಇದ್ದರು.

ಇದನ್ನೂ ಓದಿ | ಪರಿಸರ ಸೂಚ್ಯಂಕದಲ್ಲಿ ಕಳಪೆ ಸ್ಥಾನ: ಮಾನದಂಡ ಸರಿಯಿಲ್ಲ ಎಂದ ಭಾರತ

Exit mobile version