Site icon Vistara News

Samartha Bharata | ದೇಶಕ್ಕಾಗಿ ಕಾರ್ಯಪ್ರವೃತ್ತರಾಗುವುದು ನಮ್ಮೆಲ್ಲರ ಜವಾಬ್ದಾರಿ: ಕೋಟ ಶ್ರೀನಿವಾಸ ಪೂಜಾರಿ

Samartha Bharata

ಬೆಂಗಳೂರು: ರಷ್ಯಾ-ಯುಕ್ರೇನ್ ಯುದ್ಧ ಸನ್ನಿವೇಷಗಳು, ಕೊರೊನಾ ಪರಿಸ್ಥಿತಿಯು ವಿಶ್ವದ ಜನತೆಯಲ್ಲಿ ಭಾರತವು ಜಗತ್ತನ್ನು ಕಾಪಾಡಬಲ್ಲದು ಎಂಬ ಮನೋಭಾವ ಮೂಡಿಸಿವೆ. ಭಾರತ ಸಮರ್ಥ(Samartha Bharata) , ಶಕ್ತಿಶಾಲಿ, ಸ್ವಾಭಿಮಾನಿಯಾಗುವ ಹೊತ್ತಿನಲ್ಲಿ ರಾಷ್ಟ್ರಕ್ಕಾಗಿ ಕಾರ್ಯಪ್ರವೃತ್ತರಾಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸ್ವಾಮಿ ವಿವೇಕಾನಂದರ 160ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ಬೆಂಗಳೂರು ನಗರದ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಾಮಾಜಿಕ ಸಂಸ್ಥೆ ಸಮರ್ಥ ಭಾರತ ವತಿಯಿಂದ ಗುರುವಾರ ಆಯೋಜಿಸಿದ್ದ ‘BE GOOD DO GOOD-2023’ (ಉತ್ತಮನಾಗು-ಉಪಕಾರಿಯಾಗು) ಅಭಿಯಾನಕ್ಕೆ (ಜ.೧೨-ಜ.೨೬ರವರೆಗೆ) ಚಾಲನೆ ನೀಡಿ ಮಾತನಾಡಿದರು.

ಸಮರ್ಥ ಭಾರತದ ಪ್ರಧಾನ ಮಾರ್ಗದರ್ಶಕ ನಾ.ತಿಪ್ಪೇಸ್ವಾಮಿ ಮಾತನಾಡಿ, ಭಾರತ ದೇಶ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಗುಲಾಮಗಿರಿಯಲ್ಲಿದ್ದಾಗ, ವಿವೇಕಾನಂದರು ದೇಶದಾದ್ಯಂತ ಸಂಚರಿಸಿ ಜನತೆಗೆ ಜಾಗೃತಿ ಮೂಡಿಸಿದರು. ಈ ರಾಷ್ಟ್ರದ ಯುವಕರ ಮೇಲೆ ವಿಶ್ವಾಸವಿಟ್ಟು ಅವರಲ್ಲಿ ನಾಡಿಗಾಗಿ ದುಡಿಯುವ ಮನಸ್ಥಿತಿಯನ್ನು ಬೆಳೆಸಿದರು. ಭಾರತದ ಮಣ್ಣಿನ ಕಣಕಣವೂ ಪವಿತ್ರ ಎಂದು ಪೂಜಿಸಿ ರಾಷ್ಟ್ರಭಕ್ತಿಯಲ್ಲಿ ಯುವಜನತೆಗೆ ಮಾದರಿಯಾದರು ಎಂದು ತಿಳಿಸಿದರು.

ಇದನ್ನೂ ಓದಿ | National Youth Festival | ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

ವಿವೇಕಾನಂದರು ಸಾರ್ವಕಾಲಿಕ ಯೂತ್ ಐಕಾನ್. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಈ ಹಿಂದೆ ಜಗತ್ತಿಗೆ ವಿಶ್ವಗುರುವಾಗಿದ್ದ ಭಾರತ ಇಂದು ಮತ್ತೆ ಆ ಸ್ಥಾನವನ್ನು ತಲುಪಿ, ಸಮರ್ಥ ಭಾರತದ ರಚನೆಯಾಗಬೇಕಾದರೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಅನುಷ್ಠಾನವಾಗಬೇಕು ಎಂದ ಅವರು, ಜಗತ್ತು ಅಚ್ಚರಿ ಪಡುವ ರೀತಿಯಲ್ಲಿ ಭಾರತದ ಪ್ರತಿಭಾನ್ವಿತ ಯುವಕರು ಗುರುತಿಸಿಕೊಳ್ಳುತ್ತಿದ್ದಾರೆ. ಅಂತಹ ಯುವಕರನ್ನು ಸಮಾಜಮುಖಿಯಾಗಿ ಚಿಂತಿಸುವಂತೆ ತಯಾರು ಮಾಡಿದಾಗ ರಾಷ್ಟ್ರ ಸದೃಢವಾಗುತ್ತದೆ. ಈ ದೃಷ್ಟಿಯಿಂದ ಸಮರ್ಥ ಭಾರತ ‘BE GOOD DO GOOD’ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಮಾತನಾಡಿ, ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ್ದು ಕೆಲವು ನಿಮಿಷಗಳೇ ಆದರೂ ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲಿದ್ದಾರೆ. ಅವರ ಮಾತಿನಂತೆ ಎಲ್ಲಾ ಶಿಕ್ಷಣದ ಉದ್ದೇಶವೇ ಉತ್ತಮ, ಉಪಕಾರಿ ನಾಗರಿಕರನ್ನು ಸೃಷ್ಟಿಸುವುದೇ ಆಗಿದೆ ಎಂದು ಹೇಳಿದರು.

ಈ ದೇಶದ ಬಡತನ ನೀಗುವವರೆಗೂ ಇಲ್ಲಿನ ವಿದ್ಯಾವಂತರನ್ನು ನಾನು ವಿದ್ಯಾವಂತರೆಂದು ಪರಿಗಣಿಸುವುದಿಲ್ಲ ಎಂದು ವಿವೇಕಾನಂದರು ಹೇಳುತ್ತಾರೆ. ಆದರೆ ಇಂದು ವಿದ್ಯಾವಂತರೇ ಬಡತನದಲ್ಲಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಇಂಡಿಯಾ ‘ಭಾರತ’ವಾಗಬೇಕು. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಗೌರವಿಸುವುದು ನಿಜವಾದ ಶ್ರೀಮಂತಿಕೆಯಾದ್ದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸುವ ಮೂಲಕ ಸಮರ್ಥ, ಸಶಕ್ತ ಬಹುತ್ವ ಭಾರತವನ್ನು ನಿರ್ಮಿಸಿ ವಿವೇಕಾನಂದರಿಗೆ ಗೌರವ ಸಲ್ಲಿಸಬೇಕು ಎಂದರು.

ಇದನ್ನೂ ಓದಿ | Vivekananda Jayanti 2023 | ವಿಸ್ತಾರ ನ್ಯೂಸ್‌ ನಿಂದ ನಾಳೆ ವಿವೇಕ ವಂದನೆ ಕಾರ್ಯಕ್ರಮ; ಸಿಎಂ ಸೇರಿದಂತೆ ಹಲವು ಗಣ್ಯರು ಭಾಗಿ

Exit mobile version