ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠಾಪನಾ ಅಂಗವಾಗಿ ಜನವರಿ 22ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆವರೆಗೆ ನಗರದ ಮಾರತಹಳ್ಳಿಯ ಮುನ್ನೇಕೊಳಲುವಿನ ವಾಗ್ದೇವಿ ವಿಲಾಸ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ʼಸಂಪೂರ್ಣ ರಾಮಾಯಣʼ ಪ್ರದರ್ಶನ, ಶ್ರೀರಾಮ ಜಯಂ ಪುಸ್ತಕ ಬಿಡುಗಡೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9.30 ರಿಂದ 10.45 ರವರೆಗೆ ವಿದ್ಯಾರ್ಥಿಗಳಿಂದ ‘ಸಂಪೂರ್ಣ ರಾಮಾಯಣ’ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 10.45 ರಿಂದ 11.30ರವರೆಗೆ ‘ಶ್ರೀರಾಮ ಜಯಂ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗುಜರಾತ್‌ನ ಶ್ರೀ ವೇದಿಕ್ ಮಿಷನ್ ಟ್ರಸ್ಟ್ ಸಂಸ್ಥಾಪಕರಾದ ಸ್ವಾಮಿ ಧರ್ಮಬಂಧು ಮಹಾರಾಜ್, ಗೌರವ ಅತಿಥಿಗಳಾಗಿ ಹಿರಿಯ ಪ್ರಚಾರಕರು ಹಾಗೂ ಪುಸ್ತಕದ ಲೇಖಕರಾದ ಕಾ. ಶ್ರೀ. ನಾಗರಾಜ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Ayodhya Rama Mandir : ಮಂದಿರ ಲೋಕಾರ್ಪಣೆ ಹಿನ್ನೆಲೆ; ಕೇಸರಿ ಧ್ವಜ, ಪುಸ್ತಕಗಳಿಗೆ ಭಾರಿ ಬೇಡಿಕೆ
ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ಹರೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12.15 ರಿಂದ 1.00 ಗಂಟೆವರೆಗೆ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ದೇವರ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.