Site icon Vistara News

School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

School reopen

ಬೆಂಗಳೂರು: ಏಪ್ರಿಲ್‌ 11ರಿಂದ ಶುರುವಾಗಿದ್ದ ಬೇಸಿಗೆ ರಜೆಯು ಇಂದಿಗೆ (ಮೇ 28) ಮುಗಿಯುತ್ತಿದ್ದು, ನಾಳೆಯಿಂದ (ಮೇ 29) ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆಗಳು (government schools) ಪುನಾರಂಭಗೊಳ್ಳಲಿವೆ. ಶೈಕ್ಷಣಿಕ ಮಾರ್ಗಸೂಚಿಯಂತೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕಲ ತಯಾರಿ (school reopen) ಮಾಡಿಕೊಳ್ಳಲಾಗಿದೆ. ಇನ್ನೂ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಎಂಬಂತೆ ಮೊದಲ ದಿನವೇ ಕ್ಷೀರಭಾಗ್ಯ, ಬಿಸಿಯೂಟ ವಿತರಣೆಗೆ ಆದೇಶ ಹೊರಡಿಸಲಾಗಿದೆ.

ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2024-25ರ ಸಾಲಿನಲ್ಲಿ ಮೊದಲನೇ ಅವಧಿ ಮೇ 29 ಹಾಗೂ ಎರಡನೇ ಅವಧಿ ಅಕ್ಟೋಬರ್‌ 21ಕ್ಕೆ ಶುರುವಾಗಲಿದೆ. ಅಕ್ಟೋಬರ್‌ 3ರಿಂದ 20ರವರಗೆ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್‌ 11ರಿಂದ ಬೇಸಿಗೆ ರಜೆ ಶುರುವಾಗಲಿದೆ.

ಇನ್ನೂ 2024-25 ನೇ ಸಾಲಿಗೆ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಎರಡು ಜತೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಈಗಾಗಲೇ ಸಂಬಂಧಿಸಿದ ತಾಲೂಕುಗಳಿಗೆ ಸರಬರಾಜು ಮಾಡಲಾಗಿದೆ. ಏ.10 ರೊಳಗೆ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರ ಮುಖಾಂತರ ಮಕ್ಕಳಿಗೆ ತಲುಪಿಸಲಾಗಿದೆ. ಶಾಲಾ ಪ್ರಾರಂಭೋತ್ಸವದಂದು ಮಕ್ಕಳು ಸಮವಸ್ತ್ರ ಧರಿಸಿ ಪಠ್ಯಪುಸ್ತಕಗಳೊಂದಿಗೆ ಶಾಲೆಗೆ ಹಾಜರಾಗಲು ಸೂಚಿಸಲಾಗಿದೆ.

ಇದನ್ನೂ ಓದಿ: Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

ಶಾಲಾ ದಾಖಲಾತಿಗೆ ಜೂನ್‌ 30 ಕೊನೆ ದಿನ

ವಿದ್ಯಾರ್ಥಿಗಳ ಶಾಲಾ ಪ್ರವೇಶಾತಿಯನ್ನು ಮತ್ತು ದಾಖಲಾತಿಯನ್ನು ಮೇ 31 ರಿಂದ ಶಾಲಾ ಪ್ರಾರಂಭೋತ್ಸವದೊಂದಿಗೆ ಆರಂಭಿಸಿ, ಜೂನ್‌ 30ರಂದು ಮುಕ್ತಾಯಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಕೆಲವು ಮಕ್ಕಳು ನಿರಂತರವಾಗಿ ಶಾಲೆಗೆ ಗೈರು ಹಾಜರಾಗುತ್ತಿರುವುದು ಮತ್ತು ಶಾಲೆಯನ್ನು ಅರ್ಧದಲ್ಲಿಯೇ ಬಿಡುವ ಮಕ್ಕಳನ್ನು ಕಡ್ಡಾಯವಾಗಿ ಹಾಜರಾತಿಗೆ ಕ್ರಮಹಿಸಿಲು ಸೂಚಿಸಲಾಗಿದೆ. ಇದಕ್ಕಾಗಿ ಮೇ 31ರಿಂದ ಜೂನ್‌ 5ರವರಗೆ ಶಾಲಾ ದಾಖಲಾತಿ ಆಂದೋಲವನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version