ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ ಎಸ್. ಕೆ. ಭಗವಾನ್(89) ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶೀತದಿಂದ ಬಳಲುತ್ತಿದ್ದ ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಯದೇವ ಆಸ್ಪತ್ರೆಯಲ್ಲಿ ಡಾ.ಸಿ.ಎನ್.ಮಂಜುನಾಥ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.
ಚಿತ್ರರಂಗದಲ್ಲಿ ಭಗವಾನ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಅವರು 1966ರಲ್ಲಿ ಸಂಧ್ಯಾರಾಗ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ದೊರೈರಾಜ್ ಅವರ ಜತೆಗೂಡಿ ಚಿತ್ರ ನಿರ್ದೇಶನ ಮಾಡುತ್ತಿದ್ದರು. ಹೀಗಾಗಿ ದೊರೈ-ಭಗವಾನ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಿರ್ದೇಶಕ ಜೋಡಿಯಾಗಿ ಖ್ಯಾತಿಯಾಗಿತ್ತು.
ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಭಗವಾನ್ ಅವರು ೫೫ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ದೊರೈರಾಜರ ಮರಣದ ನಂತರ ಇವರು ನಿರ್ದೇಶನದಿಂದ ನಿವೃತ್ತಿ ಹೊಂದಿದರು. ೧೯೯೩ರ ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರವಾಗಿದೆ.
ಇದನ್ನೂ ಓದಿ | Prof. K S Rangappa | ಮೈಸೂರು ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪಗೆ ವಿಜ್ಞಾನ ಕ್ಷೇತ್ರದ ಜಾಗತಿಕ ಫೆಲೋಶಿಪ್