Site icon Vistara News

ವೈಟ್‌ ಟಾಪಿಂಗ್‌ ನಂತರ ಸ್ಮಾರ್ಟ್‌ ಆದ ಬೆಂಗಳೂರಿನ ಶೇಷಾದ್ರಿ ರಸ್ತೆ

Sheshadri road

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಅತಿ ಪ್ರಮುಖ ರಸ್ತೆಯಾದ ಶೇಷಾದ್ರಿ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಅಚ್ಚುಕಟ್ಟಾದ ಕಾಮಗಾರಿಯಿಂದ ಇದೀಗ ಈ ಮಾರ್ಗ ಸುಂದರವಾಗಿ ಕಾಣುತ್ತಿದೆ. ಎರಡು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇದೀಗ ಕಾಮಗಾರಿ ಮುಗಿದಿರುವುದರಿಂದ ವಾಹನ ಸವಾರರು ನಿರಾಳರಾಗಿದ್ದಾರೆ.

ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತದ(ಮೌರ್ಯ ವೃತ್ತ)ವರೆಗೆ 1.2 ಕಿ.ಮೀ ಉದ್ದದ ರಸ್ತೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶೇಷಾದ್ರಿ ರಸ್ತೆಯ ವೈಟ್‌ ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಲು 60 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸುವ ಷರತ್ತುಗೊಳಪಟ್ಟು ಸಂಚಾರ ಪೊಲೀಸರಿಂದ ಅನುಮತಿಯನ್ನು ಪಡೆಯಲಾಗಿತ್ತು. ಅದರಂತೆ ಸ್ಥಳೀಯ ಸಂಚಾರ ಪೊಲೀಸರ ಸಹಕಾರದೊಂದಿಗೆ ಶೇಷಾದ್ರಿ ರಸ್ತೆಯಲ್ಲಿ ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ)ದವರೆಗಿನ ಸಂಚಾರವನ್ನು ನಿರ್ಬಂಧಗೊಳಿಸಿ, ಸುಬ್ಬಣ್ಣ ವೃತ್ತ (ಮೌರ್ಯ ವೃತ್ತ)ದಿಂದ ಕೆ.ಆರ್ ವೃತ್ತದ ಕಡೆಗಿನ ಸಂಚಾರಕ್ಕೆ ಯಾವುದೇ ತೊಡಕಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಏಪ್ರಿಲ್‌ 4ರಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ | ರಾಷ್ಟ್ರಪತಿ ಬೆಂಗಳೂರು ಪ್ರವಾಸ: ಭಾಗವಹಿಸುವ 2 ಕಾರ್ಯಕ್ರಮಗಳ ವಿವರ ಇಲ್ಲಿದೆ

ವೈಟ್ ಟಾಪಿಂಗ್ ಕಾಮಗಾರಿಯನ್ನು ಜೂನ್‌ 12ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಿ ಮಹಾರಾಣಿ ಕಾಲೇಜು ಹತ್ತಿರವಿರುವ ಪಾದಚಾರಿ ಮೇಲುಸೇತುವೆಯ ಮೇಲೆ ಸಮಯ ಸೂಚಿಸುವ ಗಡಿಯಾರ (Countdown Clock)ಅನ್ನು ಕೂಡಾ ಅಳವಡಿಸಲಾಗಿತ್ತು. ಮೂರು ಹಂತಗಳಲ್ಲಿ ಕಾಮಗಾರಿಯನ್ನು ನಿರ್ವಹಿಸಲು ಉದ್ದೇಶಿಸಿ ಮೊದಲಿಗೆ ಕೆ. ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ)ದವರೆಗಿನ ಕಾಮಗಾರಿಯನ್ನು 20 ದಿನಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಎರಡನೆಯ ಹಂತದಲ್ಲಿ ಸುಬ್ಬಣ್ಣ ವೃತ್ತದಿಂದ, ಕೆ.ಆರ್ ವೃತ್ತದ ಕಡೆಗಿನ ರಸ್ತೆಯ ಅರ್ಧಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿ ಉಳಿದರ್ಧ ಭಾಗದಲ್ಲಿ ಕಾಮಗಾರಿಯನ್ನು ನಿರ್ವಹಿಸಿ 20 ದಿನಗಳಲ್ಲಿ ಪೂರ್ಣಗೊಳಿಸಲಾಗಿರುತ್ತದೆ.

ಮೂರನೆಯ ಹಂತದಲ್ಲಿ ಸುಬ್ಬಣ್ಣ ವೃತ್ತದಿಂದ ಕೆ.ಆರ್ ವೃತ್ತದ ಕಡೆಗಿನ ರಸ್ತೆಯಲ್ಲಿ ಈಗಾಗಲೇ ಎರಡನೆಯ ಹಂತದಲ್ಲಿ ಪೂರ್ಣಗೊಳಿಸಲಾಗಿದ್ದ ರಸ್ತೆಯ ಭಾಗಕ್ಕೆ ಸಂಚಾರವನ್ನು ಬದಲಾವಣೆ ಮಾಡಿಕೊಂಡು ಉಳಿಕೆ ಭಾಗದಲ್ಲಿ ಕಾಮಗಾರಿಯನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ. ಕಾಮಗಾರಿಯನ್ನು ನಿರ್ವಹಿಸುವ ವೇಳೆ ಮೇ ತಿಂಗಳಲ್ಲಿ 10 ದಿನ ನಗರದಲ್ಲಿ ಮಳೆಯಾಗಿದ್ದರಿಂದ ಕಾಮಗಾರಿಯನ್ನು ನಿರ್ವಹಿಸಲು ತೊಡಕಾದರೂ ಯಂತ್ರೋಪಕರಣ ಮತ್ತು ಮಾನವ ಸಂಪನ್ಮೂಲಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿಕೊಂಡು ಶೇಷಾದ್ರಿ ರಸ್ತೆ ವೈಟ್‌ಟಾಪಿಂಗ್ ಕಾಮಗಾರಿಯನ್ನು ಕೇಂದ್ರ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ನೇತೃತ್ವದ ತಂಡದಿಂದ ನಿಗದಿತ 60 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗಿದೆ.

ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಕಾಮಗಾರಿಯ ಅನುಷ್ಠಾನ ವೇಳೆ ಸಹಕರಿಸಿದ ಸಾರ್ವಜನಿಕರಿಗೆ ಮತ್ತು ಸಂಚಾರ ಪೊಲೀಸ್ ಇಲಾಖೆಯವರಿಗೆ ಪಾಲಿಕೆ ವತಿಯಿಂದ ಅವರು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರು ರಸ್ತೆಗೆ ಬಂದಿಳಿದ ಮಂಗಳ ಗ್ರಹ !

Exit mobile version