Site icon Vistara News

Skydeck Project: ಬೆಂಗಳೂರಿನಲ್ಲಿ ʼಸ್ಕೈಡೆಕ್‌ʼಗೆ ಗ್ರೀನ್‌ ಸಿಗ್ನಲ್‌; ಇದರ ಎತ್ತರ ಕುತುಬ್‌ ಮಿನಾರ್‌ಗಿಂತ 3 ಪಟ್ಟು ಹೆಚ್ಚು!

Skydeck Project

ಬೆಂಗಳೂರಿನಲ್ಲಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ದಕ್ಷಿಣ ಏಷ್ಯಾದ ಅತೀ ಎತ್ತರದ ಸ್ಕೈಡೆಕ್‌ ಗೋಪುರ ನಿರ್ಮಾಣ (South Asia’s tallest structure) ಆಗಲಿದೆ. ಈ ಯೋಜನೆಗೆ ಕರ್ನಾಟಕ ಸಚಿವ ಸಂಪುಟ (Karnataka Cabinet) ಸಭೆ ಅನುಮೋದನೆ ನೀಡಿದೆ. ಇದು ನಿರ್ಮಾಣಗೊಂಡರೆ ದಕ್ಷಿಣ ಏಷ್ಯಾದ ಅತಿ ಎತ್ತರದ ಕಟ್ಟಡ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ. ನಗರದ ಮೂಲ ಸೌಕರ್ಯಕ್ಕೆ ಉತ್ತೇಜನ ನೀಡುವ ಬೆಂಗಳೂರು ಸ್ಕೈಡೆಕ್‌ನ ಮಹತ್ವಾಕಾಂಕ್ಷೆಯ ಯೋಜನೆ (Skydeck Project) ಇದಾಗಿದೆ.

ಭಾರತೀಯ ತಂತ್ರಜ್ಞಾನದ ರಾಜಧಾನಿ ಎನ್ನಲಾಗುವ ಬೆಂಗಳೂರಿನ 360 ಡಿಗ್ರಿ ವೀಕ್ಷಣೆಯನ್ನು ಒದಗಿಸುವ ಈ ಗೋಪುರವು ಸುಮಾರು 250 ಮೀಟರ್ ಎತ್ತರ ಇರುತ್ತದೆ. ದೆಹಲಿಯಲ್ಲಿರುವ ಕುತುಬ್ ಮಿನಾರ್ ಸ್ಮಾರಕವು 73 ಮೀಟರ್ ಎತ್ತರ ಇದೆ. 250 ಮೀಟರ್ ಎತ್ತರವಿರುವ ಇದು ಕುತುಬ್ ಮಿನಾರ್‌ಗಿಂತ 3 ಪಟ್ಟು ಹೆಚ್ಚು ಎತ್ತರವಾಗಿರಲಿದೆ. ಬೆಂಗಳೂರಿನ ಅತಿ ಎತ್ತರದ ಕಟ್ಟಡ ಎನ್ನಲಾಗುವ ಸಿಎನ್ಎಂ ಟಿಸಿ ಪ್ರೆಸಿಡೆನ್ಶಿಯಲ್ ಟವರ್ ಅಂದಾಜು 160 ಮೀಟರ್ ಎತ್ತರವನ್ನು ಹೊಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕದ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್, ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್‌ಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. 500 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಸ್ಕೈಡೆಕ್ ನಿರ್ಮಿಸಲಾಗುವುದು. ಇದು ಭಾರತದ ತಂತ್ರಜ್ಞಾನ ರಾಜಧಾನಿಯ 360 ಡಿಗ್ರಿ ನೋಟವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.


ಬೆಂಗಳೂರಿನ ಹೊರಭಾಗದಲ್ಲಿ ನೈಸ್ ರಸ್ತೆಯ ಬಳಿ ನಿರ್ಮಾಣವಾಗಲಿರುವ ಸ್ಕೈಡೆಕ್ ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ನೀಡಲಿದೆ. ಪ್ರವಾಸಿಗರು ತಲುಪಲು ಪ್ರಯತ್ನಿಸುವಾಗ ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ಮೆಟ್ರೋ ರೈಲಿಗೆ ಸಂಪರ್ಕ ಕಲ್ಪಿಸಲಾಗುವುದು. ಅದ್ಧೂರಿ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಹೊರತುಪಡಿಸಿ, ಸ್ಕೈ ಡೆಕ್‌ನೊಳಗೆ ಸೇರಿಸಲಾದ ಇತರ ಸೌಲಭ್ಯಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.


ಸರ್ಕಾರವು ಆರಂಭದಲ್ಲಿ ಬೆಂಗಳೂರಿನ ಮಧ್ಯದಲ್ಲಿ ಸ್ಕೈಡೆಕ್ ಅನ್ನು ನಿರ್ಮಿಸಲು ಬಯಸಿತ್ತು. ಆದರೆ ಎರಡು ದೊಡ್ಡ ಸವಾಲುಗಳು ಉದ್ಭವಿಸಿದವು. ಮೊದಲನೆಯದಾಗಿ, ನಗರದ ಮಧ್ಯದಲ್ಲಿ 25 ಎಕರೆ ಭೂಮಿಯನ್ನು ಗೊತ್ತುಪಡಿಸುವುದು ಕಷ್ಟಕರವಾಗಿತ್ತು. ಎರಡನೆಯದಾಗಿ ಬೆಂಗಳೂರು ನಗರದ ಅನೇಕ ಪ್ರದೇಶಗಳಲ್ಲಿ ರಕ್ಷಣಾ ಇಲಾಖೆಯ ನೆಲೆಗಳಿವೆ. ಹಾಗಾಗಿ ರಕ್ಷಣಾ ಇಲಾಖೆಯು ಇಂತಹ ಎತ್ತರದ ಗೋಪುರಕ್ಕೆ ಆಕ್ಷೇಪಣೆಯನ್ನು ಎತ್ತಿತ್ತು.

ಇದನ್ನೂ ಓದಿ: MB Patil: ವಿಮಾನ‌ ನಿಲ್ದಾಣ, ಏರ್ ಸ್ಟ್ರಿಪ್ ಪ್ರಗತಿ ಪರಿಶೀಲನೆ; ತಾಂತ್ರಿಕ ಅಡಚಣೆ ನಿವಾರಣೆಗೆ ಸಚಿವ ಎಂ‌.ಬಿ. ಪಾಟೀಲ ಸೂಚನೆ

ನಗರದ ಮಧ್ಯದಲ್ಲಿ ಅತ್ಯಂತ ಎತ್ತರದ ಗೋಪುರವನ್ನು ಹೊಂದಿರುವುದು ನಾಗರಿಕರಿಗೆ, ಮಿಲಿಟರಿ ವಿಮಾನ ನಿಲ್ದಾಣಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಆದ್ದರಿಂದ ಬೆಂಗಳೂರಿನ ಹೊರ ಭಾಗಕ್ಕೆ ಸ್ಕೈಡೆಕ್ ಯೋಜನೆಗೆ ಅನುಮೋದನೆ ನೀಡಲಾಗಿದೆ.


Exit mobile version