Site icon Vistara News

Sneha Book House: ಸ್ನೇಹ ಬುಕ್ ಹೌಸ್‌ ಪ್ರಕಟನೆಯ 3 ಕೃತಿಗಳ ಲೋಕಾರ್ಪಣೆ

book release

ಬೆಂಗಳೂರು: ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ಸದಸ್ಯರು ರಚಿಸಿರುವ, ಸ್ನೇಹ ಬುಕ್ ಹೌಸ್ ((Sneha Book House)) ಪ್ರಕಟಿಸಿರುವ ಮೂರು ಕೃತಿಗಳನ್ನು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌’ ನ ಬಿಪಿ ವಾಡಿಯಾ ಹಾಲ್‌ನಲ್ಲಿ ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ನಿವೃತ್ತ ಬ್ಯಾಂಕರ್‌ಗಳಾದ ಶ್ರವಣ ಕುಮಾರಿ ಅವರ ಕಥಾಸಂಕಲನ ʼಬೆಳಕು ಹರಿಯುವ ಮುನ್ನʼ ಮತ್ತು ಗುರುರಾಜ ಶಾಸ್ತ್ರಿಯವರ ಕಥಾಸಂಕಲನ ʼಕತೆ-ಕೋಸಂಬರಿʼ , ಪ್ರವಾಸ ಕಥನ ʼಬಾ ಗುರು ಪ್ರವಾಸ ಹೋಗೋಣʼ ಕೃತಿಗಳನ್ನು. ಖ್ಯಾತ ಕಾದಂಬರಿಕಾರ ಗಜಾನನ ಶರ್ಮ ಲೋಕಾರ್ಪಣೆ ಮಾಡಿ, ಕೃತಿಕಾರ ತನ್ನ ಅನುಭವವನ್ನು ಓದುಗನಿಗೆ ದಾಟಿಸಲು ಸಮರ್ಥನಾದರೆ ಅದೇ ಕೃತಿಯ ಯಶಸ್ಸು ಎಂದರು.

ʼಬೆಳಕು ಹರಿಯುವ ಮುನ್ನʼ ಕಥಾಸಂಕಲನದ ಪರಿಚಯವನ್ನು ಕತೆಗಾರ ಜಿ. ವಿ. ಅರುಣ ಮಾಡಿಕೊಟ್ಟರೆ,
ʼಕತೆ-ಕೋಸಂಬರಿʼ ಕಥಾಸಂಕಲನದ ಪರಿಚಯವನ್ನು ವಿಶ್ವವಾಣಿ ಪತ್ರಿಕೆಯ ಸಾಹಿತ್ಯ ಪುರವಣಿ ʼಆರಾಮ/ ವಿರಾಮʼ ಗಳ ಸಂಪಾದಕ ಶಶಿಧರ ಹಾಲಾಡಿ ಮಾಡಿಕೊಟ್ಟರು.

ʼಬಾ ಗುರು ಪ್ರವಾಸ ಹೋಗೋಣʼ ಪ್ರವಾಸ ಕಥನದ ಪರಿಚಯವನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ನಾಟಕಕಾರ, ಕಾದಂಬರಿಕಾರ, ಹಾಸ್ಯ ಸಾಹಿತಿ ಎಂ. ಎಸ್. ನರಸಿಂಹಮೂರ್ತಿಯವರು ಪರಿಚಯಿಸಿದರು. ಕೃತಿರಚನೆಯ ಹಿನ್ನೆಲೆಯನ್ನು ಶ್ರವಣ ಕುಮಾರಿ ಮತ್ತು ಗುರುರಾಜ ಶಾಸ್ತ್ರಿ ವಿವರಿಸಿ, ತಮ್ಮ ಸಾಹಿತ್ಯ ಸಾಧನೆಗೆ ನೆರವಾದವರಿಗೆ‌ ಕೃತಜ್ಞತೆ ಸಲ್ಲಿಸಿದರು.

ಮೂರು ಪುಸ್ತಕಗಳನ್ನು ಪ್ರಕಟಿಸಿರುವ ಸ್ನೇಹ ಬುಕ್ ಹೌಸ್‌ನ ಕೆ.ಬಿ.ಪರಶಿವಪ್ಪ, ಮಾತನಾಡಿ, ಸಸಕಸ ಪ್ರತಿಷ್ಠಾನದ ಜೊತೆಗಿನ ತಮ್ಮ ಸಂಸ್ಥೆಯ ಉತ್ತಮ ಬಾಂಧವ್ಯ ಇದೇ ರೀತಿ ಮುಂದುವರೆಯಲಿದೆ ಎಂದರು.

ಇದನ್ನೂ ಓದಿ | ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಸುರಕ್ಷತೆಗೆ ಆದ್ಯತೆ, ನಮ್ಮೆಲ್ಲರ ಬದ್ಧತೆ

ಸಮಾರಂಭದ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿ, ಕನ್ನಡವೇ ಸತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬೆಂ. ಶ್ರೀ. ರವೀಂದ್ರ ವಹಿಸಿ, ಸಮಾರಂಭ ಯಶಸ್ವಿಯಾದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸುತ್ತಾ, ಕೃತಿಯ ಯಶಸ್ಸಿಗೆ ಕೃತಿಕಾರ ವಹಿಸಬೇಕಾದ ನಿರಂತರ ಪರಿಶ್ರಮದ ಅಗತ್ಯವನ್ನು ವಿವರಿಸಿದರು.

ಶ್ರೀ ದತ್ತಾತ್ರೇಯ ಮತ್ತು ಶ್ರೀ ಪಾದ ವಲ್ಲಭ ಅವರಿಂದ ʼಇನ್ನಷ್ಟು ಬೇಕು ಶ್ರೀ ರಾಮʼ ಗೀತೆಯಿಂದ ಆರಂಭವಾದ
ಸಮಾರಂಭಕ್ಕೆ ಆಗಮಿಸಿದವರನ್ನು ರವಿ ಕುಸಬಿ ಸ್ವಾಗತಿಸಿದರೆ, ಸಮಾರಂಭದ ಯಶಸ್ಸಿಗೆ ಕೊಡುಗೆ ನೀಡಿದ ಎಲ್ಲರಿಗೆ, ವಂದನೆಗಳನ್ನು ಹು. ವಾ. ಪ್ರಕಾಶ್ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಶುಭಶ್ರೀ ಪ್ರಸಾದ್ ನಿರ್ವಹಿಸಿದರು.

Exit mobile version