ಬೆಂಗಳೂರು: ಖ್ಯಾತ ನಿರ್ಮಾಪಕನ ಪುತ್ರ ಸ್ನೇಹಿತ್ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಪ್ರಮುಖ ಘಟನೆ ನಡೆದಿದೆ. ದಂಪತಿ ಜೊತೆ ಗಲಾಟೆ ಸಂಬಂಧ ಸ್ನೇಹಿತ್ ಜಗದೀಶ್ (Snehith Jagadeesh) ಮತ್ತೆ ಸುದ್ದಿಯಲ್ಲಿದ್ದಾರೆ. ಆರೋಪದ ಬೆನ್ನಲ್ಲೇ ಸ್ನೇಹಿತ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಸಂದರ್ಭದಲ್ಲೇ ಸ್ನೇಹಿತ್ ಪರವಾಗಿ ನಟಿ ಪ್ರಿಯಾಂಕಾ ಮತ್ತು ನಟ ಉಪೇಂದ್ರ ಮಾತನಾಡಿದ್ದಾರೆ.
ನಿರ್ಮಾಪಕ ಜಗದೀಶ್ ಮತ್ತು ಸೌಂದರ್ಯ ದಂಪತಿ ಪುತ್ರನ ವಿರುದ್ಧ ಹಲವು ಬಾರಿ ಇದೇ ರೀತಿಯಾಗಿ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ಸ್ನೇಹಿತ್ ಸುದ್ದಿಯಲ್ಲಿದ್ದು, ದಂಪತಿ ಜೊತೆ ಗಲಾಟೆ ಮಾಡಿರುವ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದೇ ಹೊತ್ತಲ್ಲಿ ಉಪೇಂದ್ರ ದಂಪತಿ ಸ್ನೇಹಿತ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಸ್ನೇಹಿತ್ ಒಳ್ಳೇ ಹುಡುಗ
ಜಗದೀಶ್ ಪುತ್ರನ ಪರ ಮಾತನಾಡಿರುವ ನಟಿ ಪ್ರಿಯಾಂಕಾ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ನಾವು ಕಳೆದ 25 ವರ್ಷದಿಂದ ಸ್ನೇಹಿತ್ನನ್ನು ನೋಡಿದ್ದೇವೆ. ಒಳ್ಳೆಯ ಗುಣವನ್ನು ಬೆಳಸಿಕೊಂಡು ಬಂದಿರುವ ಯುವಕ ಆತ. ತಂದೆ ತಾಯಿಯಿಂದ ಆತ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾನೆ. ಆ ಹುಡುಗನ ವಿರುದ್ಧ ಆರೋಪ ಮಾಡುವ ಮೊದಲು ಇದನ್ನ ತಿಳಿದುಕೊಳ್ಳಿ ಎಂದಿದ್ದಾರೆ.
ರಿಯಲ್ ಸ್ಟಾರ್ ಮಾತು
ಮತ್ತೊಂದು ಕಡೆ ನಟಿ ಪ್ರಿಯಾಂಕಾ ಅವರ ಪತಿ ಉಪೇಂದ್ರ ಕೂಡ ಸ್ನೇಹಿತ್ ಪರ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಸೌಂದರ್ಯ ಜಗದೀಶ್ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು 25 ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್ ತುಂಬಾ ಮೃದು ಸ್ವಭಾವದವರು, ಸ್ನೇಹ ಜೀವಿ. ಇತ್ತೀಚೆಗೆ ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ದಿಗ್ಭ್ರಮೆಯಾಯಿತು ಎಂದಿದ್ದಾರೆ.
ಹಾಗೇ ತಮ್ಮ ಪೋಸ್ಟ್ನಲ್ಲಿ ಸ್ನೇಹಿತ್ ವಿನಯವಂತ ಎಂದು ನಟ ಉಪೇಂದ್ರ ಬರೆದುಕೊಂಡಿದ್ದಾರೆ. ನಾನು ಕಂಡಂತೆ ಈತ ತುಂಬಾ ವಿನಯವಂತ, ಬೆಳೆಯುತ್ತಿರುವ ಹುಡುಗ. ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ತಿಳಿಯದು. ಭಿನ್ನಾಭಿಪ್ರಾಯವಿದ್ದರೆ ಸಮಾಧಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ. ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ, ದ್ವೇಷದ ಫಲ ಸರ್ವನಾಶ ಎಂದಿದ್ದಾರೆ ನಟ ಉಪೇಂದ್ರ.
ಮತ್ತೊಂದು ಕಡೆ ಉಪೇಂದ್ರ ಅವರ ಪೋಸ್ಟ್ಗೆ ಟೀಕೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಅವನು ತಪ್ಪು ಮಾಡಿಲ್ಲವೆಂದು ನಾನು ಹೇಳಿಲ್ಲ, ನನಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಗೌರವವಿದೆ ಎಂದಿದ್ದಾರೆ. ಈ ಮೂಲಕ ತಮ್ಮ ಪೋಸ್ಟ್ ಬಗ್ಗೆ ಮಾತನಾಡಿದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಸದ್ಯ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ರೇಪ್ ಮಾಡ್ತೀನಿ, ಸಾಯಿಸ್ತೀನಿ ! ಖ್ಯಾತ ನಿರ್ಮಾಪಕನ ಮಗನಿಂದ ದುರ್ವರ್ತನೆ, ಕೊಲೆ ಬೆದರಿಕೆ