Site icon Vistara News

Spoken English Classes : ಶಿಕ್ಷಣ ಇಲಾಖೆಯಿಂದ ಸಿಹಿ ಸುದ್ದಿ; ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ಶನಿವಾರ ಇಂಗ್ಲಿಷ್‌ ಕ್ಲಾಸ್‌!

Spoken English Classes

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳು ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕ್ಲಾಸ್ (Spoken English Classes) ಶುರು ಮಾಡಲು ತಯಾರಿ ನಡೆದಿದೆ. How to Make English Easy ಎಂಬ ಪರಿಕ್ಪನೆಯೊಂದಿಗೆ ಈ ಯೋಜನೆಯನ್ನು ರೂಪಿಸುವಂತೆ ಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‌ಇಎಲ್) 2024-25ರ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪರಿಚಯಿಸಲಿದೆ. 40 ನಿಮಿಷಗಳ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪ್ರತಿ ಶನಿವಾರ ನಡೆಸಲು ಸಿದ್ಧತೆ ನಡೆದಿದೆ.

ಈ ಹಿಂದೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶುರು ಮಾಡಿರುವುದು ಸಾಕಷ್ಟು ಸದ್ದು ಮಾಡಿತ್ತು. ಇದೀಗ ರಾಜ್ಯದಲ್ಲೂ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್‌ ಕಲಿಯುವ ಅವಕಾಶ ಕಲ್ಪಿಸಲು ಮುಂದಾಗಿದೆ.

2024-25ರ ಶೈಕ್ಷಣಿಕ ವರ್ಷದಿಂದ ಸ್ಪೋಕನ್ ಕ್ಲಾಸ್ ಶುರುವಾಗಲಿದೆ. ಸರ್ಕಾರಿ ಶಾಲೆಗಳಲ್ಲಿರುವ ಇಂಗ್ಲಿಷ್ ಶಿಕ್ಷಕರಿಂದ ಸ್ಪೋಕನ್ ಇಂಗ್ಲಿಷ್ ಪಾಠ ಮಾಡಲಾಗುತ್ತದೆ. ಈ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗಿದ್ದು, ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ಶುರು ಮಾಡಲಾಗುತ್ತದೆ. ಈ ಮೂಲಕ ಸರಕಾರಿ ಶಾಲೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಆಗಿರುವ ಇಂಗ್ಲಿಷ್ ಭಾಷೆಯನ್ನು ಕರಗತಗೊಳಿಸಲು ಇದು ಸಹಕಾರಿ ಆಗಲಿದೆ.

ಎಸ್‌ಎಸ್‌ಎಲ್‌ಸಿ ಮುಗಿದ ಮೇಲೆ ಇಂಗ್ಲಿಷ್‌ ಬರಲ್ಲ ಎಂಬ ಕಾರಣಕ್ಕೆ ವಿಜ್ಞಾನ ಬಿಟ್ಟು ಬೇರೆ ಬೇರೆ ಕೋರ್ಸ್‌ ಸೇರುವ ಅವಶ್ಯಕತೆಯು ಇರುವುದಿಲ್ಲ. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ(JEE), ಎನ್ ಇಇಟಿ(NEET), ಸಾಮಾನ್ಯ ಪ್ರವೇಶ ಪರೀಕ್ಷೆ(CET)ಗಳನ್ನು ಎದುರಿಸಲು ವೃತ್ತಿಪರಕೋರ್ಸ್‌ಗಳಾದ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ಗೆ ಪ್ರವೇಶ ಪಡೆಯಲು ಇಂಗ್ಲೀಷ್ ಭಾಷೆ ಅಗತ್ಯವಿದ್ದ ಕಾರಣ ವಿದ್ಯಾರ್ಥಿಗಳು ಹೆದರುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗಳ ಹಂತದಲ್ಲೇ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ನೀಡಿದರೇ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಇಲಾಖೆ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: Vijayanagara News : ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

ಇಂಗ್ಲಿಷ್‌ನಲ್ಲೇ ಮಾತಾಡಬೇಕು!

ಪ್ರತಿ ಶನಿವಾರದ 3ನೇ ತರಗತಿಯನ್ನು ಸ್ಪೋಕನ್ ಇಂಗ್ಲಿಷ್‌ಗೆ ಮೀಸಲಿಡಲಾಗುತ್ತದೆ. ಸುಮಾರು 40 ನಿಮಿಷದ ಅವಧಿಯಲ್ಲಿ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡಬೇಕು. ಈ ಮೂಲಕ ವಿದ್ಯಾರ್ಥಿಗಳು, ಸಹಜವಾಗಿ ಇಂಗ್ಲಿಷ್ ಕಲಿಯಲು ಪೂರಕ ವಾತಾವರಣವನ್ನು ಸೃಷ್ಟಿಸಬೇಕೆಂಬ ಸೂಚನೆ ನೀಡಲಾಗಿದೆ.

ಇಂಗ್ಲಿಷ್ ತರಗತಿ ಹೇಗಿರಲಿದೆ?

ಶಾಲೆಯಲ್ಲಿ ವಿದ್ಯಾರ್ಥಿಗಳ ತಂಡವೊಂದು ರಚಿಸಲಾಗುತ್ತದೆ. ಸಂಭಾಷೆ, ನಾಟಕ, ಕಥೆ ಹೇಳುವುದು, ಅನುಭವಗಳನ್ನು ಹಂಚಿಕೆಕೊಳ್ಳುವುದೆಲ್ಲವೂ ಸ್ಪೋಕನ್‌ ಇಂಗ್ಲಿಷ್‌ ಕ್ಲಾಸ್‌ನಲ್ಲಿ ಇರಲಿದೆ. ಶಾಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದಲೇ ಇಂಗ್ಲಿಷ್‌ನಲ್ಲಿ ನಿರೂಪಣೆ ಮಾಡಿಸಲಾಗುತ್ತದೆ. ಇಂಗ್ಲಿಷ್‌ನಲ್ಲಿ ನಿರ್ವಹಣೆ ಮಾಡುವುದು ಹೇಗೆ ಎಂದು ತಿಳಿಸಿಕೊಡಲಾಗುತ್ತದೆ. ಎಲ್‌ಕೆಜಿಯಿಂದ ನಲಿ-ಕಲಿ ತರಗತಿಗಳಿಗೆ ವಿವಿಧ ರೀತಿಯ ಚಾರ್ಟ್ ರಚಿಸುವುದು. ಮಾನವನ ಶರೀರದ ಭಾಗಗಳು, ಹಣ್ಣು- ತರಕಾರಿಗಳು, ಬಣ್ಣಗಳು, ವಾಹನಗಳು ಸೇರಿ ಇತರೆ ಚಿತ್ರ/ಭಾಗಗಳನ್ನು ಗುರುತಿಸಿ ದಾಖಲಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version