ಬೆಂಗಳೂರು: ನಗರದ ಬ್ಯಾಟರಾಯನಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಪಿಎಂಸಿ ಮಾರುಕಟ್ಟೆ ಮೈದಾನದಲ್ಲಿ ಕೇಸರಿ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಬ್ಯಾಟರಾಯನಪುರ ಶ್ರೀನಿವಾಸ ಕಲ್ಯಾಣೋತ್ಸವವು (Srinivasa Kalyanotsava) ಅತ್ಯಂತ ಅದ್ಧೂರಿಯಾಗಿ ನಡೆಯಿತು. ಬಿಜೆಪಿ ಮುಖಂಡ ಎಚ್.ಸಿ.ತಮ್ಮೇಶ್ ಗೌಡ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀವಚನಾನಂದ ಸ್ವಾಮೀಜಿ, ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಬಿಡಿಎ ಅಧ್ಯಕ್ಷ, ಶಾಸಕ ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮತ್ತು ಅನೇಕ ಬಿಜೆಪಿಯ ಮುಖಂಡರು ಸೇರಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ತಿರುಮಲ ತಿರುಪತಿ ದೇವಸ್ಥಾನದ ರೀತಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕಲ್ಯೋಣೋತ್ಸವ ನೆರವೇರಿತು. ಭಕ್ತರಿಗೆ ತಿರುಮಲ ತಿರುಪತಿ ದೇವಾಲಯದ ಲಡ್ಡು ಪ್ರಸಾದ ಮತ್ತು ಕ್ಯಾಲೆಂಡರ್ ಅನ್ನು ನೀಡಲಾಯಿತು ಹಾಗೂ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಈ ವೇಳೆ ತಿರುಮಲ ತಿರುಪತಿ ದೇವಾಲಯದ ಆಸ್ಥಾನ ಗಾಯಕ ಶ್ರೀ ಕೃಷ್ಣ ಅವರಿಂದ ಸಂಗೀತೋತ್ಸವ ಕಾರ್ಯಕ್ರಮ ಅಯೋಜಿಸಲಾಗಿತ್ತು.
ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಮಾತನಾಡಿ, ತಮ್ಮೇಶ್ ಗೌಡರ ಸೇವೆ ಶ್ಲಾಘನೀಯ ಹಾಗೂ ಜಗತ್‌ಕಲ್ಯಾಣದ ಕಾರ್ಯವಾಗಿದೆ. ಎಲ್ಲಾ ಭಕ್ತರಿಗೂ ಭಗವಂತನ ಆಶೀರ್ವಾದ ಸಿಗಲಿ ಹಾಗೂ ತಮ್ಮೇಗೌಡ ಅವರಿಗೂ ಭಗವಂತ ಇನ್ನಷ್ಟು ಶಕ್ತಿ ಕೊಟ್ಟು ಹೆಚ್ಚು ಹೆಚ್ಚು ಜನಸೇವೆ ಮಾಡುವಂತಾಗಲಿ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶ್ರೀ ಶ್ರೀನಿವಾಸನ ಅನುಗ್ರಹ ಎಲ್ಲ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನರ ಮೇಲಿರಲಿ. ತಮ್ಮೇಶ್ ಗೌಡರನ್ನು ಹಲವಾರು ವರ್ಷಗಳಿಂದ ಗಮನಿಸುತ್ತಿದ್ದೇನೆ, ಅವರು ಮಾಡುತ್ತಿರುವ ಜನಸೇವೆ ಅಸಾಮಾನ್ಯವಾದುದು. ಕೋವಿಡ್ ಸಮಯದಲ್ಲಿ ಅವರು ಕ್ಷೇತ್ರದ ಸಾವಿರಾರು ಕುಟುಂಬಗಳ ನೆರವಿಗೆ ನಿಂತರು. ಅವರು ನಡೆಸುತ್ತಿರುವ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧ ಶಿಬಿರಗಳಲ್ಲಿ ಸಾವಿರಾರು ಜನರು ಫಲಾನುಭವಿಗಳಾಗಿದ್ದಾರೆ. ಅದೇ ರೀತಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ವೈಭವದಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | BJP Karnataka : ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರದ ಹುಟ್ಟು: ಸಚಿವ ಡಾ. ಕೆ. ಸುಧಾಕರ್ ಆರೋಪ
ತಮ್ಮೇಶ್ ಗೌಡರು ವಿದ್ಯಾರ್ಥಿಯಾಗಿರುವಾಗಲೇ ಎಬಿವಿಪಿ ಸಂಘಟನೆಯಲ್ಲಿ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ನಮ್ಮ ಪಕ್ಷದಲ್ಲಿಯೂ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಪಕ್ಷದ ಸಂಘಟನೆ ಮಾಡಿದಂತಹ ಒಬ್ಬ ಸಮರ್ಥ ನಾಯಕರಾಗಿದ್ದಾರೆ. ಈ ಶ್ರೀನಿವಾಸ ಕಲ್ಯಾಣೋತ್ಸವವನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನರ ಒಳಿತಿಗಾಗಿ ಅದ್ಧೂರಿಯಾಗಿ ಆಯೋಜಿಸಿದ್ದಾರೆ. ತಮ್ಮೇಶ್ ಗೌಡರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲಿರಲಿ ಎಂದು ಕೋರಿದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಬ್ಯಾಟರಾಯನಪುರದಲ್ಲಿ ತಮ್ಮೇಶ್‌ಗೌಡರು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಅನೇಕ ಧಾರ್ಮಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿ ತಮ್ಮೇಶ್ ಗೌಡ ಮಾತನಾಡಿ, ನನಗೆ ಯಾವಾಗಲೂ ಬಿ.ಎಸ್.ಯಡಿಯೂರಪ್ಪ ಅವರು ಸ್ಫೂರ್ತಿದಾಯಕರಾಗಿದ್ದಾರೆ. ಕೋವಿಡ್ ಸಮಯದಲ್ಲಿ ಅವರಿಗೆ ಕೊರೊನಾ ಬಂದಿದ್ದರೂ ದಿನ ನಿತ್ಯ ಕರ್ತವ್ಯ ನಿರ್ವಹಿಸಿ ನಮ್ಮ ರಾಜ್ಯವನ್ನು ಕಾಪಾಡಿದರು. ಆ ಸಮಯದಲ್ಲಿ ನನಗೂ ಕೋವಿಡ್ ಬಂದಿತ್ತು. ಯಡಿಯೂರಪ್ಪನವರ ಕೆಲಸವನ್ನು ನೋಡಿ ನಾನು ಸಹ ಅನೇಕ ಕಾರ್ಯಗಳನ್ನು ಮಾಡಿದೆ. ಇಡೀ ರಾಜ್ಯದಲ್ಲಿ ಶಿಕಾರಿಪುರ ಒಂದು ಮಾದರಿ ವಿಧಾನಸಭಾ ಕ್ಷೇತ್ರವಾಗಿದೆ. ನಮ್ಮ ಬ್ಯಾಟರಾಯನಪುರವು ಮಾದರಿ ವಿಧಾನಸಭಾ ಕ್ಷೇತ್ರವಾಗಬೇಕೆಂಬ ಸಂಕಲ್ಪದೊಂದಿಗೆ ಅನೇಕ ಕೆಲಸಗಳನ್ನು ಮಾಡುತ್ತಿದ್ದೇನೆ. ಇದಕ್ಕೆ ಜನರ ಆಶೀರ್ವಾದ ಅಗತ್ಯ ಎಂದು ಮನವಿ ಮಾಡಿದರು.
ಇದನ್ನೂ ಓದಿ | Republic Day : ಒಂದೇ ವಾರಕ್ಕೆ ಸಿದ್ಧವಾಯಿತು ʼನಾರಿಶಕ್ತಿʼ ಸ್ತಬ್ಧ ಚಿತ್ರ: ಕರ್ತವ್ಯ ಪಥದಲ್ಲಿ ಪೂರ್ವಾಭ್ಯಾಸ