ಬೆಂಗಳೂರು: ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ನಾವೀನ್ಯತೆಯ ಪ್ರತಿಭೆಗೆ ವೇದಿಕೆ ಒದಗಿಸಲು ಮೇ 24ರಿಂದ 26ರವರೆಗೆ ʼಸೃಷ್ಟಿ ಇನ್ನೋವೇಶನ್ ಎಕ್ಸ್‌ಚೇಂಜ್ 2024ʼ (SRISHTI 2024) ಕಾರ್ಯಕ್ರಮವನ್ನು ನಗರದ ಎಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ವಿಎಸ್‌ಎಸ್ ಟ್ರಸ್ಟ್, ಎಬಿವಿಪಿ, ಯುವಕ ಸಂಘ, ಎಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಎಐಸಿಟಿಇ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇ 24ರಂದು ಶುಕ್ರವಾರ ಸಂಜೆ 3.30ಕ್ಕೆ ಎಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಉದ್ಘಾಟನಾ ಸಮಾರಂಭ ನೆರವೇರಿದ್ದು, ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಉಪಾಧ್ಯಕ್ಷ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ, ಗೌರವ ಅತಿಥಿಗಳಾಗಿ ಭಾರತದ ಮರ್ಸಿಡಿಸ್-ಬೆನ್ಜ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಮನು ಸಾಲೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್ ವಿದ್ಯಾಶಂಕರ್, ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಶ್ ಚೌಹಾಣ್ ಭಾಗವಹಿಸಿದ್ದರು.
ಎಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷ ಹಾಗೂ ASKB ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್‌ನ ಟ್ರಸ್ಟಿ ಸಿ.ಎಸ್.ಸುಂದರ್ ರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭ ಮೇ 26ರಂದು ಮಧ್ಯಾಹ್ನ 3ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಗೌರವ ಅತಿಥಿಗಳಾಗಿ NAAC ನಿರ್ದೇಶಕ ಪ್ರೊ. ಗಣೇಶನ್ ಕನ್ನಬೀರನ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ವಿಟಿಯು ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಎ.ಎಸ್. ಟಿ.ಎನ್.ಶ್ರೀನಿವಾಸ್, ಎಬಿವಿಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಎಸ್. ಬಾಲಕೃಷ್ಣ, ಎಟ್ರಿಯಾ ಎಜುಕೇಶನ್‌ನ ನಿರ್ದೇಶಕ ಕೌಶಿಕ್ ರಾಜು ಉಪಸ್ಥಿತರಿರಲಿದ್ದಾರೆ. ASKB ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್‌ನ ಟ್ರಸ್ಟಿ ಕೆ.ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ವಿಎಸ್ಎಸ್ ಟ್ರಸ್ಟ್ ಕಾರ್ಯದರ್ಶಿ ಡಾ.ಡಿ.ಎಸ್.ಕೃಷ್ಣ, ಎಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ. ರಾಜೇಶ್. ಎಸ್, ಎಬಿವಿಪಿ ಕರ್ನಾಟಕ ಉತ್ತರ ರಾಜ್ಯಾಧ್ಯಕ್ಷ ಡಾ.ಆನಂದ ಹೊಸೂರು, ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ, ಯುವಕ ಸಂಘದ ಅಧ್ಯಕ್ಷ ಡಾ. ಟಿ.ವಿ. ರಾಜು, ಎಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಪ ಪ್ರಾಂಶುಪಾಲೆ ಡಾ. ನಳಿನಾಕ್ಷಿ. ಎನ್., ಎಬಿವಿಪಿ ಕರ್ನಾಟಕ ದಕ್ಷಿಣದ ಅಧ್ಯಕ್ಷ ಡಾ. ಸತೀಶ್.ಎಚ್.ಕೆ, ರಾಜ್ಯ ಕಾರ್ಯದರ್ಶಿ ಪ್ರವೀಣ್. ಎಚ್.ಕೆ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ
ಸೃಷ್ಟಿ-2024 ಭಾಗವಾಗಿ ವಿವಿಧ ಕಾರ್ಯಕ್ರಮ
ʼಸೃಷ್ಟಿ 2024ʼ, ಉತ್ಸಾಹಿ ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ವಿಜ್ಞಾನಿಗಳನ್ನು ರಚಿಸಲು ಮತ್ತು ಮುಕ್ತ ಉದ್ಯಮಶೀಲತೆಯ ಮಾರ್ಗಗಳ ಬಗ್ಗೆ ಒಳನೋಟ ನೀಡಲು ವೇದಿಕೆ ಒದಗಿಸಲಿದೆ. ಸೃಷ್ಟಿಯು ಸಂವಹನವನ್ನು ಅಭಿವೃದ್ಧಿಪಡಿಸುವ ಮತ್ತು ಉದ್ಯಮ ಮತ್ತು ಸಂಸ್ಥೆಗಳ ನಡುವಿನ ಸಮಕಾಲೀನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ. ಐಐಎಸ್ಸಿ, ಐಐಟಿ, ಎನ್ಐಟಿ ಮತ್ತು ಇತರ ಪ್ರತಿಷ್ಠಿತ ಟೆಕ್ ಸಂಸ್ಥೆಗಳ ಬೋಧಕರನ್ನು ಒಳಗೊಂಡ ತಾಂತ್ರಿಕ ಸಮಿತಿಯು, ಪರಿಶೀಲನೆಯ ನಂತರ ಪ್ರತಿವರ್ಷ ಕರ್ನಾಟಕದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳ ನೂರಾರು ಉತ್ಸಾಹಿ ವಿದ್ಯಾರ್ಥಿಗಳು ಪ್ರಾಜೆಕ್ಟ್ ಎಕ್ಸಿಬಿಷನ್ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ʼಸೃಷ್ಟಿ ಇನ್ನೋವೇಶನ್ ಎಕ್ಸ್‌ಚೇಂಜ್ 2024ʼ ಭಾಗವಾಗಿ ಸೃಷ್ಟಿ ಪ್ರದರ್ಶನ, ಸೃಷ್ಟಿ ಇನ್ನೋವೇಟರ್, ಸೃಷ್ಟಿ ಪರಮ್ ಟ್ಯಾಲೆಂಟ್ ಕ್ವೆಸ್ಟ್ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.