ಬೆಂಗಳೂರು: ಮಾರ್ಚ್-ಏಪ್ರಿಲ್ 2024ರ ಎಸ್ಎಸ್‌ಎಲ್‌ಸಿ ಪರೀಕ್ಷೆಯನ್ನು (SSLC Result 2024) ಮಾ. 25 ರಿಂದ ಏ. 06 ರವರೆಗೆ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಏ.15ರಿಂದ 24ರವರೆಗೆ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 237 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 61,160 ಮೌಲ್ಯಮಾಪಕರು ಪಾಲ್ಗೊಂಡಿದ್ದರು. ಈ ಬಾರಿ ಪರೀಕ್ಷೆಗೆ ಒಟ್ಟು 8,59,967 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 6,31,204 ಮಂದಿ ಉತ್ತೀರ್ಣರಾಗಿದ್ದು, ಶೇ. 73.40ರಷ್ಟು ಫಲಿತಾಂಶ ಬಂದಿದೆ. ಇನ್ನೂ ಈ ಬಾರಿ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದರೆ, ಅತ್ತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಿಕ್ಸರ್ ಬಾರಿಸಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಹಿಂದಿಕ್ಕಿರುವ ಅನುದಾನರಹಿತ ಶಾಲೆಗಳು ಫಲಿತಾಂಶದಲ್ಲಿ ಮುನ್ನುಗಿವೆ.
ಬಾಲಕಿಯರೇ ಫಸ್ಟ್
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 8,59,967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 2,87,416 ಹುಡುಗರು, 3,43,788 ಹುಡುಗಿಯರು ಪಾಸ್ ಆಗಿದ್ದಾರೆ. ಈ ಮೂಲಕ ಬಾಲಕರು ಶೇ. 65.90 ಹಾಗೂ ಬಾಲಕಿಯರು ಶೇ. 81.11 ಫಲಿತಾಂಶದ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಸಿಕ್ಸರ್ ಬಾರಿಸಿದ ಗ್ರಾಮೀಣ ವಿದ್ಯಾರ್ಥಿಗಳು
ಇನ್ನೂ ಪ್ರತಿ ಬಾರಿಯಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಮುಂದಿದ್ದಾರೆ. ನಗರ ಪ್ರದೇಶದಲ್ಲಿ 4,93,900 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,59,703 ವಿದ್ಯಾರ್ಥಿಗಳು ಪಾಸ್ ಆಗಿದ್ದು ಶೇ. 72ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದಲ್ಲಿ 3,66,067 ವಿದ್ಯಾರ್ಥಿಗಳು ಹಾಜರಾಗಿದ್ದು, 2,71,501 ಉತ್ತೀರ್ಣರಾಗಿದ್ದು, ಶೇ. 74.17 ರಷ್ಟು ಫಲಿತಾಂಶ ಬಂದಿದೆ.
ಸರ್ಕಾರಿ ಶಾಲೆಗಳನ್ನು ಹಿಂದಿಕ್ಕಿದ ಅನುದಾನರಹಿತ ಶಾಲೆ
ಈ ಬಾರಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಹಿಂದಿಕ್ಕಿ ಅನುದಾನರಹಿತ ಶಾಲೆಗಳು ಮುಂದಿದೆ. 5906 ಸರ್ಕಾರಿ ಶಾಲೆಗಳಿಂದ 3,36,533 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಈ ಪೈಕಿ 2,43, 851 ವಿದ್ಯಾರ್ಥಿಗಳು ಪಾಸ್ ಆಗಿದ್ದು, 72.46% ಶೇಕಡಾವಾರು ಫಲಿತಾಂಶ ಬಂದಿದೆ. 3,606 ಅನುದಾನಿತ ಶಾಲೆಗಳಿಂದ 2,07,821 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,50,094 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 72.22ರಷ್ಟು ಫಲಿತಾಂಶ ಬಂದಿದೆ. 6144 ಅನುದಾನರಹಿತ ಶಾಲೆಗಳಿಂದ 2,58,753 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 2,23,720 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದು, 86.46 ರಷ್ಟು ಫಲಿತಾಂಶ ಬಂದಿದೆ.
ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್; ಫಸ್ಟ್ ಬೆಂಚ್‌ಗೆ ಬಂದ ಉಡುಪಿ; ಲಾಸ್ಟ್ ಬೆಂಚ್‌ನಲ್ಲೇ ಉಳಿದ ಯಾದಗಿರಿ!
78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ರಾಜ್ಯದಲ್ಲಿ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 3 ಸರ್ಕಾರಿ ಶಾಲೆಗಳು ಹಾಗೂ 13 ಅನುದಾನಿತ ಶಾಲೆಗಳು ಸೇರಿದಂತೆ 62 ಅನುದಾನಿತ ಶಾಲೆಗಳು ಶೂನ್ಯ ಫಲಿತಾಂಶ ಬಂದಿದೆ. ಕಳೆದ ಬಾರಿ 34 ಶಾಲೆಗಳು ಶೂನ್ಯ ಫಲಿತಾಂಶ ಬಂದಿತ್ತು. ಈ ಬಾರಿ ಶೂನ್ಯ ಫಲಿತಾಂಶವು ದುಪ್ಪಟ್ಟಾಗಿದೆ.
ಎಸ್‌ಎಂಎಸ್ ಮೂಲಕವೂ ಬರುತ್ತೆ ರಿಸಲ್ಟ್
ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು https://karresults.nic.in ವೀಕ್ಷಿಸಬಹುದು. ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮೇ 9ರ ಬೆಳಗ್ಗೆ 10.30 ರ ನಂತರ ಎಸ್.ಎಂ.ಎಸ್ ಮೂಲಕ ರವಾನಿಸಲಾಗುತ್ತದೆ. ಶಾಲೆಗಳ ಕ್ರೋಢೀಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಮಂಡಲಿಯ ಜಾಲತಾಣ https://kseab.karnataka.gov.in ಗುರುವಾರ 1 ಗಂಟೆಯ ನಂತರ ನೀಡಲಾಗುವುದು. ಶಾಲಾ ಹಂತದಲ್ಲಿ ಅಂದೇ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಫಲಿತಾಂಶವನ್ನು ಪ್ರೌಢಶಾಲೆಗಳಲ್ಲಿ ಆ ದಿನವೇ ಪ್ರಕಟಿಸಲಾಗುವುದು.
ವೆಬ್ ಕಾಸ್ಟಿಂಗ್ ಪದ್ಧತಿ
ಪ್ರಪ್ರಥಮ ಬಾರಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಈ ಕ್ರಮವು ವಿನೂತನವಾಗಿದ್ದು, ಪರೀಕ್ಷೆಯ ಸಮಗ್ರತೆಯನ್ನು ಪುನರ್‌ಸ್ಥಾಪಿಸಲು ಸಹಾಯಕವಾಗಿದೆ. ಈ ಮೂಲಕ ಪರೀಕ್ಷಾ ಅಕ್ರಮಗಳನ್ನು ಆಶ್ರಯಿಸದೆ ಪರೀಕ್ಷೆಗಳನ್ನು ಬರೆಯುವ ಅಭ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಸಫಲವಾಗಿದ್ದು, ಈ ಕ್ರಮವನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನೊಳಗೊಂಡಂತೆ ಎಲ್ಲರೂ ಸ್ವಾಗತಿಸಿದ್ದಾರೆ.