ಬೆಂಗಳೂರು: ಅಖಿಲ ಭಾರತ ಚೆಸ್ ಫೆಡರೇಷನ್ ಫಾರ್ ದಿ ಬ್ಲೈಂಡ್ ಮತ್ತು ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್ ಫಾರ್ ವಿಶುವಲಿ ಚಾಲೆಂಜ್ಡ್ ಸಂಸ್ಥೆ ಸಹಯೋಗದಲ್ಲಿ ಆಯೋಜನೆಗೊಂಡಿರುವ ದಕ್ಷಿಣ ವಲಯ ಚೆಸ್ ಚಾಂಪಿಯನ್ಶಿಪ್ಗೆ ಜನವರಿ 5ರಂದು ಚಾಲನೆ ದೊರೆಯಿತು. ನಗರದ ಬಸವನಗುಡಿ ನಿಜಗುಣರ ಕ್ಷೇತ್ರ ಸಭಾಂಗಣದಲ್ಲಿ ಜನವರಿ 7ರವರೆಗೆ ಈ ಟೂರ್ನಮೆಂಟ್ ನಡೆಯಲಿದೆ. ಕರ್ನಾಟಕ, ಕೇರಳ, ತಮಿಳುನಾಡು, ಪುದುಚೆರಿ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸೇರಿದಂತೆ 6 ರಾಜ್ಯಗಳಿಂದ ಸುಮಾರು 160 ದೃಷ್ಟಿ ವಿಶೇಷಚೇತನ ಚೆಸ್ಪಟುಗಳು ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡಿದ್ದಾರೆ.
ಸಕ್ಷಮ ರಾಷ್ಟ್ರೀಯ ಅಧ್ಯಕ್ಷ ಗೋವಿಂದರಾಜನ್, ಚದುರಂಗದ ಕಾಯಿಗಳನ್ನು ಚಲಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂತಹ ಕ್ರೀಡಾಕೂಟಗಳು ದೃಷ್ಟಿ ವಿಶೇಚೇತನರಿಗೆ ಆತ್ಮವಿಶ್ವಾಸ ತುಂಬುತ್ತದೆ ಎಂದರು. ಅಲ್ಲದೆ, ಟೂರ್ನಮೆಂಟ್ ಆಯೋಜಿಸಿದ್ದ ಸಕ್ಷಮ ಕರ್ನಾಟಕ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.
ನಳಂದ ಚೆಸ್ ಅಕಾಡೆಮಿ ಸ್ಥಾಪಿಸಿ ದೃಷ್ಟಿ ವಿಶೇಷ ಚೇತನರಿಗೆ ಚೆಸ್ ತರಬೇತಿ ನೀಡುತ್ತಿರುವ ಶ್ರೀಕೃಷ್ಣ ಉಡುಪ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಪ್ಯಾರಾ ಏಷ್ಯನ್ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತ ಹಾಗೂ ಎಐಸಿಎಫ್ಬಿ ಉಪಾಧ್ಯಕ್ಷ ಕಿಶನ್ ಗಂಗೊಳ್ಳಿ ಅವರು ಮಾತನಾಡಿದರು. ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಡಾ. ಸುಧೀರ್ ಪೈ ಅವರು, ಆರ್ಎನ್ಎಸ್ ಕಾಲೇಜಿನ ಎನ್ಎಸ್ಎಸ್ ಸದಸ್ಯರನ್ನು ಸನ್ಮಾನಿಸಿದರು. ಸಕ್ಷಮ ಕರ್ನಾಟಕ ರಾಜ್ಯಾಧ್ಯಕ್ಷ ವಸಂತ ಮಾಧವ್, ಕಾ. ಶಂ. ಶ್ರೀಧರ್ , ಯೋಗೀಶ್, ಪ್ರಾಂತ ಖಜಾಂಚಿ ರಮೇಶ್ ಪ್ರಭು, ಡಾ.ಹರಿಕೃಷ್ಣ ರೈ ಉಪಸ್ಥಿತರಿದ್ದರು.
ಇದನ್ನೂ ಓದಿ | Chess Tournament | ಮಹಿಳಾ ಚೆಸ್‌ಪಟುವನ್ನು ವಿಶ್ವ ಮಟ್ಟದ ಟೂರ್ನಿಯಿಂದ ಹೊರಕ್ಕೆ ಕಳುಹಿಸಿದ ಆಯೋಜಕರು