Site icon Vistara News

Stray Dog Attack: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಅಟ್ಟಾಡಿಸಿದ ಬೀದಿನಾಯಿ; ಕಾಲಿಗೆ ಗಾಯ!

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ (Stray Dog Attack) ನಗರದ ಬಾಣಸವಾಡಿಯ ಓಎಂಬಿಆರ್ ಲೇಔಟ್‌ನಲ್ಲಿ ಜರುಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳು ಜನರಿಗೆ ಕಂಟಕವಾಗಿ ಪರಿಣಮಿಸಿದ್ದು, ಬೀದಿ ನಾಯಿ ದಾಳಿಗೆ ಮಹಿಳೆ ಬಲಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಜರುಗಿದ್ದು, ನಾಯಿ ದಾಳಿಯಿಂದ ಯುವತಿಯ ಕಾಲಿಗೆ ಗಾಯಗೊಳಿಸಿರುವ ದೃಶ್ಯ, ಸಿಸಿಟಿವಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Road Accident : ದುಬೈ ಪ್ರವಾಸಕ್ಕೆ ಹೋದ ಗೋಕಾಕ್‌ ಮೂಲದ ನಾಲ್ವರು ಸಜೀವ ದಹನ

ಬೀದಿ ನಾಯಿಗಳ ಹಾವಳಿಯಿಂದ ನಗರದ ಜನತೆ ರೋಸಿ ಹೋಗಿದ್ದು, ದಂಡು ಕಟ್ಟಿ ದಾಳಿ ಮಾಡುವ ಶ್ವಾನಗಳ ಉಪಟಳ ಮಿತಿಮೀರಿದೆ. ಸುಮ್ಮನೆ ಹೋಗುತ್ತಿದ್ದವರ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡುತ್ತಿವೆ. ನಿನ್ನೆ ಬಾಣಸವಾಡಿಯ ಓಎಂಬಿಆರ್ ಲೇಔಟ್‌ನಲ್ಲಿ ಬೀದಿನಾಯಿ ಅಟ್ಯಾಕ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೀದಿ ನಾಯಿಗಳ ದಾಳಿಗೆ ಬಲಿಯಾದ ನಿವೃತ್ತ ಶಿಕ್ಷಕಿ

ನಿವೃತ್ತ ಶಿಕ್ಷಕಿಯೊಬ್ಬರು ಬುಧವಾರ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅವರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಾಲಹಳ್ಳಿಯ ಏರ್ ಫೋರ್ಸ್ ಈಸ್ಟ್ 7 ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರುವ ಆಟದ ಮೈದಾನದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ವಾಯುಸೇನೆ ಸಿಬ್ಬಂದಿಯ ಅತ್ತೆ, 75 ವರ್ಷದ ರಾಜ್ದುಲಾರಿ ಸಿನ್ಹಾ ಅವರ ಮೇಲೆ ಸುಮಾರು ಏಳೆಂಟು ಬೀದಿ ನಾಯಿಗಳು ಹಠಾತ್ ದಾಳಿ ನಡೆಸಿದ್ದು, ತಲೆ ಹಿಂಬದಿ, ಮುಖ, ಕೈ, ಕತ್ತಿನ ಭಾಗವನ್ನು ಶ್ವಾನಗಳು ಕಚ್ಚಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Wild Animals Attack : ಕೊಡಗಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ; ಕೆಸರಿನಲ್ಲಿ ಬಿದ್ದು ನರಳಾಡಿ ಪ್ರಾಣಬಿಟ್ಟ ಆನೆ

ಮೃತ ಮಹಿಳೆಯ ಅಳಿಯ ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಳಿಯ ಮತ್ತು ಮಗಳನ್ನು ನೋಡಲು ಮಹಿಳೆ ಬಿಹಾರದಿಂದ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಈ ಹಿಂದೆಯೂ ಇದೇ ಕ್ಯಾಂಪಸ್ ನಲ್ಲಿ ನಾಲ್ಕೈದು ಜನರ ಮೇಲೆ ನಾಯಿಗಳು ದಾಳಿ ನಡೆಸಿತ್ತು. ಈ ಕುರಿತು ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Exit mobile version