Site icon Vistara News

ಬೆಂಗಳೂರಿನಲ್ಲಿ ಬೀದಿ ನಾಯಿ ಹಾವಳಿ, ನಿತ್ಯ 300-400 ಶ್ವಾನಗಳಿಗೆ ವ್ಯಾಕ್ಸಿನ್ ಗುರಿ: ಪ್ರಭು ಚೌಹಾಣ್

ಪ್ರಭು ಚೌಹಾಣ್‌

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ವ್ಯಾಕ್ಸಿನ್ ಹಾಕಲು ನಿರ್ಧರಿಸಲಾಗಿದೆ. ಪ್ರತಿದಿನ 300-400 ನಾಯಿಗಳಿಗೆ ವ್ಯಾಕ್ಸಿನ್ ಹಾಕುವ ಗುರಿ ಹೊಂದಿದ್ದು, ಪಾಲಿಕೆ ಸಹಕಾರದೊಂದಿಗೆ ವ್ಯಾಕ್ಸಿನೇಷನ್ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಸಚಿವರು, ನಾಯಿ ಹಾವಳಿ ಬಗ್ಗೆ ಬಿಬಿಎಂಪಿ ವ್ಯಾಪ್ತಿಯಿಂದ ಸಾಕಷ್ಟು ದೂರು ಬರುತ್ತಿವೆ. ಈಗಾಗಲೇ ಈ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ಸಭೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಮೂರು ಲಕ್ಷ ನಾಯಿಗಳಿವೆ ಎಂದು ಅಂದಾಜಿಸಲಾಗಿದ್ದು, ವ್ಯಾಕ್ಸಿನೇಷನ್‌ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | Karwar: ಮಕ್ಕಳು ಸೇರಿ ಏಳು ಜನರಿಗೆ ಕಚ್ಚಿದ ಬೀದಿ ನಾಯಿ

ಸದ್ಯದಲ್ಲೇ ಬಿಬಿಎಂಪಿ ಆಯುಕ್ತರ ಜತೆಗೂ ಸಭೆ ಮಾಡಲಾಗುವುದು. ಈಗ ದಿನಕ್ಕೆ 240 ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಗುತ್ತಿದ್ದು, ಹೆಚ್ಚುವರಿಯಾಗಿ ಇನ್ನೂ 100 ನಾಯಿಗಳಿಗೆ ವ್ಯಾಕ್ಸಿನ್‌ ಮಾಡಬೇಕು ಎನ್ನುವ ನಿರ್ಧಾರ ಮಾಡಿದ್ದೇವೆ. ನಿತ್ಯ 300-400 ನಾಯಿಗಳಿಗೆ ವ್ಯಾಕ್ಸಿನ್ ಹಾಕುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ನಾಯಿ ಕಡಿತದಿಂದ ಮೃತಪಟ್ಟರೆ ಲಕ್ಷ ರೂ. ಪರಿಹಾರ

ಬೀದಿ ನಾಯಿ ಕಡಿತದಿಂದ ಮೃತಪಟ್ಟರೆ ಪರಿಹಾರ ನೀಡಲಾಗುತ್ತಿದೆ. 50 ಸಾವಿರದಿಂದ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಸಚಿವ ಪ್ರಭು ಚೌಹಾಣ್ ಮಾಹಿತಿ ನೀಡಿದರು.

ಬಕ್ರೀದ್‌ ಹಬ್ಬದಂದು ನೂರಾರು ಗೋ ರಕ್ಷಣೆ

ಬಕ್ರೀದ್ ಹಿನ್ನೆಲೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ನಿಯಮ ಉಲ್ಲಂಘನೆ ವಿಚಾರವಾಗಿ ಮಾತನಾಡಿದ ಸಚಿವ ಪ್ರಭು ಚೌಹಾಣ್, ಕಳೆದ 15 ದಿನಗಳಿಂದ ರಾಜ್ಯ ಪ್ರವಾಸ ಕೈಗೊಂಡು ಚೆಕ್ ಪೋಸ್ಟ್ ಹಾಕಲಾಗಿತ್ತು. ಬಕ್ರೀದ್ ಆಚರಣೆ ವೇಳೆ ಗೋ ಹತ್ಯೆ ತಡೆಯುವ ಪ್ರಯತ್ನ ಮಾಡಲಾಗಿದೆ. ಹಲವು ಜಿಲ್ಲೆಗಳಲ್ಲಿ ಹಸುಗಳನ್ನು ರಕ್ಷಣೆ ಮಾಡಲಾಗಿದ್ದು, ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಸುಮಾರು 25 ಸಾವಿರ ಗೋವುಗಳ ರಕ್ಷಣೆ ಮಾಡಲಾಗಿದೆ ಎಂದರು.

ಬಕ್ರೀದ್‌ ದಿನದಂದು 35 ಹಸುಗಳನ್ನು ಗೋ ಶಾಲೆಗೆ ಕಳಿಸಿದ್ದು, ಕಲಬುರಗಿಯಲ್ಲಿ 25 ಕೇಸ್ ದಾಖಲಾಗಿದೆ. ಕೋಲಾರದಲ್ಲಿ 6 ಕೇಸ್‌ ಹಾಗೂ ಕಾರವಾರ ಭಾಗದಲ್ಲಿ 6 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಕ್ರೀದ್‌ನಲ್ಲಿ ಗೋವಧೆ ಕಡಿಮೆ ಆಗಿದೆ. ಗೋ ಹತ್ಯೆ ಸಂಪೂರ್ಣವಾಗಿ ನಿಂತಿಲ್ಲ, ಆದರೆ ಕಡಿಮೆಯಾಗಿದೆ. ಕೋಲಾರದಲ್ಲಿ ಎರಡು ಲಾರಿಗಳು ಮಹಾರಾಷ್ಟ್ರಕ್ಕೆ ಸಾಗಾಣಿಕೆ ಮಾಡುತ್ತಿದ್ದ ಆರು ಹಸುಗಳ ರಕ್ಷಣೆ ಮಾಡಲಾಗಿದೆ ಎಂದರು.

ಇದನ್ನೂ ಓದಿ | ಹೆತ್ತ ಕುಡಿಯನ್ನು ಬಡತನಕ್ಕೆ ಹೆದರಿ ಬೀದಿಗೆ ಬಿಟ್ಟಳು, ಕರುಳಿನ ಕೂಗಿಗೆ ಮರುಗಿ ಮತ್ತೆ ಓಡಿ ಬಂದಳು!

Exit mobile version