Site icon Vistara News

Buddy Bench Conversations; ಸಾಕುನಾಯಿ ಗೋಪಿ ಮೂರ್ತಿ ಜತೆ ಸುಧಾಮೂರ್ತಿ ಭಾಗಿ

Buddy Bench Conversations

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಅವರ ಶಿಕ್ಷಣ ಸಂಸ್ಥೆಯ ವಿನೂತನ ʼBuddy Bench Conversationsʼ ಚರ್ಚಾ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಮೊದಲ ಸಂಚಿಕೆಯ ಅತಿಥಿಗಳಾಗಿ ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಅವರು ತಮ್ಮ ಪ್ರೀತಿಯ ಸಾಕುನಾಯಿ ಗೋಪಿ ಮೂರ್ತಿ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಗಮನ ಸೆಳೆಯಿತು.

ʼBuddy Bench Conversationsʼ ಕಾರ್ಯಕ್ರಮವು ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್, ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್, ಅಪೋಲೋ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಅಂಬರ್ ವ್ಯಾಲಿ ರೆಸಿಡೆನ್ಷಿಯಲ್ ಶಾಲೆಗಳ ವಿದ್ಯಾರ್ಥಿಗಳ ನಡುವೆ ಸಂಪರ್ಕ ಬೆಸೆದು, ಒಂದು ಬಲಿಷ್ಠ ಸಮೂಹ ಕಟ್ಟುವ ಪ್ರಯತ್ನವಾಗಿದೆ.

ಕ್ಯಾಟಲಿಸ್ಟ್ ಲ್ಯಾಬ್ ಮೂಲಕ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು

ಕಳೆದ ವರ್ಷ ಐಶ್ವರ್ಯ ಡಿಕೆಎಸ್ ಹೆಗ್ಡೆ ಅವರು ತಮ್ಮ ಶಾಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಪ್ರಯೋಗಾಲಯವನ್ನು ಖ್ಯಾತ ಉದ್ಯಮಿ, ಬರಹಗಾರ್ತಿ ಸುಧಾಮೂರ್ತಿ ಅವರಿಂದ ಉದ್ಘಾಟನೆ ಮಾಡಿಸಿದ್ದರು. ಈ ಪ್ರಯೋಗಾಲಯವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ಮನೋವಿಕಾಸ, ಆತ್ಮ ವಿಶ್ವಾಸ, ಉಪಕಾರ ಸ್ಮರಣೆ, ಕ್ಷಮಾಶೀಲತೆಯಂತಹ ಮೌಲ್ಯಾಧಾರಿತ ಶಿಕ್ಷಣಕ್ಕೆ ವೇದಿಕೆಯಾಗಿದೆ.

ಇದನ್ನೂ ಓದಿ | Residential School: ವಸತಿ ಶಾಲೆಯ 6ನೇ ತರಗತಿ ಪ್ರವೇಶಾತಿ; ಅರ್ಜಿ ಸಲ್ಲಿಸೋಕೆ ಡಿ.31 ಕೊನೇ ದಿನ

ಈಗ Buddy Bench Conversations ಕಾರ್ಯಕ್ರಮವು ಕೂಡ ಈ ಪ್ರಯೋಗಾಲಯದ ಭಾಗವಾಗಿದೆ. ಮಕ್ಕಳಲ್ಲಿ ಸಂವಹನ ಗುಣ ಬೆಳೆಸಿ, ಅವರು ತಮ್ಮ ಸುತ್ತಮುತ್ತಲಿನ ಸಮುದಾಯದ ನೆರವನ್ನು ಪಡೆಯುವಂತೆ ಮಾಡುವುದು ಇದರ ಉದ್ದೇಶ. ಮಕ್ಕಳಲ್ಲಿ ಒಂಟಿತನ ಮೂಡದಂತೆ ನೋಡಿಕೊಳ್ಳುವುದು ಪ್ರಮುಖ ಉದ್ದೇಶ.

Buddy Bench Conversations ಕಾರ್ಯಕ್ರಮದ ಮೂಲಕ ಮಕ್ಕಳು ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಕರು, ಗೆಳೆಯರ ಜತೆ ಅರ್ಥಪೂರ್ಣ ಹಾಗೂ ಪ್ರೋತ್ಸಾಹದಾಯಕ ಚರ್ಚೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು. ಬೇರೆಯವರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೋ ಎಂಬ ಕೀಳರಿಮೆಯನ್ನು ಮಕ್ಕಳಿಂದ ದೂರಮಾಡಿ, ಧೈರ್ಯವಾಗಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸುವ ಪ್ರಯತ್ನ ಇದಾಗಿದೆ.

ಮೊದಲ ಸಂಚಿಕೆಯ ಮುಖ್ಯಾಂಶಗಳು

ಈ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಸುಧಾಮೂರ್ತಿ ಅವರು ತಮ್ಮ ಪ್ರೀತಿಯ ಸಾಕುನಾಯಿ ಗೋಪಿ ಮೂರ್ತಿಯೊಂದಿಗೆ ಭಾಗವಹಿಸಿದ್ದರು. ಸುಧಾಮೂರ್ತಿ ಅವರು ತಮ್ಮ ಜೀವನ, ಸಾಧನೆ ಮತ್ತು ತಮ್ಮ ಸಾಕುಪ್ರಾಣಿ ಜತೆಗಿನ ಒಡನಾಟ, ಅವರ ದಿನನಿತ್ಯದ ಕಾರ್ಯ ಚಟುವಟಿಕೆಗಳ ಕುರಿತಾಗಿ ಶಾಲಾ ಮಕ್ಕಳ ಜೊತೆ ಸಂವಾದ ನಡೆಸಿದರು.

ಇದನ್ನೂ ಓದಿ | CBSE Board Exam: ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಈ ಕಾರ್ಯಕ್ರಮದ ಮುಂದಿನ ಸಂಚಿಕೆಗಳಲ್ಲಿ ಸಂವಾದದ ಜತೆಗೆ ಕುತೂಹಲ ಮೂಡಿಸುವ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಮಕ್ಕಳು, ಅತಿಥಿಗಳು ಹಾಗೂ ತಮ್ಮ ಗೆಳೆಯರ ಜತೆ ಸಂವಾದ ಮಾಡುವ ಮೂಲಕ ಎಲ್ಲರೊಟ್ಟಿಗೆ ಬೆರೆಯುವ ಅವಕಾಶ ಕಲ್ಪಿಸಲಾಗುತ್ತದೆ. ಆ ಮೂಲಕ ಮಕ್ಕಳು ಪರಸ್ಪರ ಬೆರೆತು ನೆರವಾಗುವಂತೆ ಮಾಡಲಾಗುವುದು.

Exit mobile version