ಬೆಂಗಳೂರು: ಸಮೃದ್ದ ಆಮ್ಲಜನಕ ನೀಡುವ ಕಾಡನ್ನು ಉಳಿಸುವಂತಹ ಪಣವನ್ನು ಎಲ್ಲರೂ ತೊಡಬೇಕು ಎಂದು ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾ ಅನುರಾಧ ಕರೆ ನೀಡಿದರು. ಬುಧವಾರ(ಜೂನ್ 15) ಬೆಂಗಳೂರಿನಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾಲ್ನಡಿಗೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಸಂಧರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಬಹಳಷ್ಟು ಸಮಸ್ಯೆಯನ್ನು ಅನುಭವಿಸಿದ್ದೇವೆ. ಆಮ್ಲಜನಕವನ್ನು ಸಮೃದ್ದವಾಗಿ ನೀಡುವಂತಹ ಪರಿಸರ ಮತ್ತು ಕಾಡನ್ನು ಬೆಳೆಸುವಂತಹ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅವಶ್ಯಕತೆಯನ್ನು ಅರಿತುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಕಾಡನ್ನು ಬೆಳೆಸುವ ಹಾಗೂ ಪರಿಸರವನ್ನು ರಕ್ಷಿಸುವಂತಹ ಪಣವನ್ನು ನಾವೆಲ್ಲರೂ ತೊಡಬೇಕಾಗಿದೆ. ಅರಣ್ಯ ಅಭಿವೃದ್ದಿ ನಿಗಮ ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಕಾಡನ್ನು ಉಳಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ನಿಗಮದ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ| ಪರಿಸರ ಸೂಚ್ಯಂಕದಲ್ಲಿ ಕಳಪೆ ಸ್ಥಾನ: ಮಾನದಂಡ ಸರಿಯಿಲ್ಲ ಎಂದ ಭಾರತ
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ಕೆ. ಸಿಂಗ್ ಮಾತನಾಡಿ, ಪರಿಸರ ಜಾಗೃತಿ ಮಾಸಾಚರಣೆಯ ತಿಂಗಳಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಬಹಳ ಸಂತಸದ ವಿಷಯ. ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಗಳು ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.
ನಿಗಮದ ಉಪಾಧ್ಯಕ್ಷರಾದ ರೇವಣ್ಣಪ್ಪ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಧಾದೇವಿ ಸೇರಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ| ಅರಣ್ಯ ಇಲಾಖೆ ಸೆರೆ ಹಿಡಿದ ಕೆಲ ಹೊತ್ತಿನಲ್ಲೇ ಮೃತಪಟ್ಟ ಹೆಣ್ಣಾನೆ