ಬೆಂಗಳೂರು : ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ೬೦ನೇ ಆವೃತ್ತಿಯ ರಾಷ್ಟ್ರೀಯ ರೋಲರ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ಸ್‌ಗೆ ಆತಿಥ್ಯ ವಹಿಸಿದ್ದು, ಡಿಸೆಂಬರ್ ೧೧ರಿಂದ ೨೨ರವರೆಗೆ ಸ್ಪರ್ಧೆಗಳು ನಡೆಯಲಿವೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟಾರೆ ೫೦೦೦ಕ್ಕೂ ಅಧಿಕ ಸ್ಪರ್ಧಿಗಳು ಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಬೆಂಗಳೂರು ಹಾಗೂ ತುಮಕೂರಿನಲ್ಲಿ ಸ್ಪರ್ಧೆಗಳು ನಡೆಯಲಿವೆ. ರಾಜ್ಯ ಮಟ್ಟದ ಸ್ಪರ್ಧೆಗಳ ಮೂಲಕ ಆಯ್ಕೆಯಾಗಿರುವ ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದು, ಇಲ್ಲಿ ಚಾಂಪಿಯನ್‌ಪಟ್ಟ ಗಳಿಸಿದವರು ಏಷ್ಯಾ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.
ಇದು ಕರ್ನಾಟಕದಲ್ಲಿ ಮೂರನೇ ಬಾರಿ ನಡೆಯುತ್ತಿರುವ ರೋಲರ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ . ಈ ಹಿಂದೆ 49ನೇ ಮತ್ತು 54ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯ ಆತಿಥ್ಯ ವಹಿಸಿ ಯಶಸ್ಸು ಸಾಧಿಸಿತ್ತು.
ಮುಖ್ಯಮಂತ್ರಿ ಬಸರವಾಜ್ ಬೊಮ್ಮಾಯಿ ಉದ್ಘಾಟನೆ
ಭಾನುವಾರ (ಡಿಸೆಂಬರ್ 11) ಸಂಜೆ 6 ಗಂಟೆಗೆ ಬೆಂಗಳೂರಿನ ಎಸ್‌ಎಸ್‌ಎಂ ಶಾಲೆಯ ಎದುರು ಬಿಬಿಎಂಪಿ ಚೆನ್ನಮ್ಮಕೆರೆ ಅಚ್ಚುಕಟ್ಟು ಆಟದ ಮೈದಾನದಲ್ಲಿರುವ 1, 200 ಮೀಟರ್ ಟ್ರ್ಯಾಕ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಕೂಟದ ಸಂಘಟನಾ ಸಮಿತಿಯ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ಸೇರಿದಂತೆ ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಭಾರತದ ಮೊದಲ ಒಳಾಂಗಣ 200 ಮೀ ಟ್ರ್ಯಾಕ್‌ನಲ್ಲಿ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗಳು ನಡೆಯಲಿವೆ. ಇದು ಸ್ಕೇಟಿಂಗ್‌ಗಾಗಿ ಅಭಿವೃದ್ಧಿಪಡಿಸಲಾದ ಭಾರತದ ಮೊದಲ ಒಳಾಂಗಣ ರೋಲರ್ ಸ್ಕೇಟಿಂಗ್ ಟ್ರ್ಯಾಕ್.
ಘಟಾನುಘಟಿ ಸ್ಪರ್ಧಿಗಳು ಭಾಗಿ
ವಿಶ್ವ ಸ್ಪೀಡ್ ಸ್ಕೇಟಿಂಗ್ ಪದಕ ವಿಜೇತ ತಮಿಳುನಾಡಿನ ಆನಂದ್ ವೇಲ್‌ಕುಮಾರ್, ಕೇರಳದ ವಿಶ್ವ ಆರ್ಟಿಸ್ಟಿಕ್ ಚಾಂಪಿಯನ್ ಅಭಿಜಿತ್ ಅಮಲರಾಜ್, ಏಷ್ಯಾ ಮಟ್ಟದ ಸ್ಪರ್ಧೆಯ ಪೋಡಿಯಂ ಫಿನಿಶರ್ ಮತ್ತು ಗುಜರಾತ್ ನ್ಯಾಷನಲ್ ಗೇಮ್ಸ್‌ನಲ್ಲಿ ತ್ರಿವಳಿ ಚಿನ್ನದ ಪದಕ ಗೆದ್ದಿರುವ ಸ್ಪೀಡ್ ಸ್ಕೇಟರ್ ಆರತಿ ಕಸ್ತೂರಿರಾಜ್, ಮಣಿಪುರದ ಸ್ಕೇಟ್‌ಬೋರ್ಡಿಂಗ್ ಪ್ರತಿಭೆ ರಂಜು ಚಿಂಗಾಂಗ್‌ಬಾಮ್ ಜೊತೆಗೆ 100ಕ್ಕೂ ಹೆಚ್ಚು ಅಂತಾರರಾಷ್ಟ್ರೀಯ ಮಟ್ಟದ ಸ್ಕೇಟರ್‌ಗಳು ಕೂಡ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಂಧ್ರಪ್ರದೇಶದಿಂದ 367 ಸ್ಕೇಟರ್‌ಗಳ ದೊಡ್ಡ ತಂಡವೇ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಬರಲಿದೆ. ಆತಿಥೇಯ ಕರ್ನಾಟಕದಿಂದ 328 ಸ್ಕೇಟರ್‌ಗಳು ಸ್ಪರ್ಧೆಗೆ ಇಳಿಯಲಿದ್ದಾರೆ. ಅದೇ ರೀತಿ ಈಶಾನ್ಯ ರಾಜ್ಯಗಳಿಂದಲೂ ಅತಿ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದು, ಹೊಸದಾಗಿ ರಚನೆಯಾದ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಿಂದಲೂ ಮಹಿಳಾ ಸ್ಪರ್ಧಿಗಳು ಭಾಗವಹಿಸುತ್ತಿರುವುದು ವಿಶೇಷ.
“ಯಾವುದೇ ಕ್ರೀಡೆಯ ಅಭಿವೃದ್ಧಿಯಲ್ಲಿ ಮೂಲಸೌಕರ್ಯವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ರೋಲರ್ ಕ್ರೀಡೆಗಳಿಗೆ ಸಂಬಂಧಿಸಿದಂತೆ, ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಉತ್ತಮ ಮೂಲಸೌಕರ್ಯಗಳಿವೆ. ಈಗ, ಈ ಅತ್ಯಾಧುನಿಕ ಒಳಾಂಗಣ 200 ಮೀಟರ್ ಬ್ಯಾಂಕಿಂಗ್ ಟ್ರ್ಯಾಕ್ ಬರುವುದರೊಂದಿಗೆ, ಇದು ದೇಶದಲ್ಲಿ ಸ್ಪೀಡ್ ಸ್ಕೇಟಿಂಗ್‌ನ ವ್ಯಾಪ್ತಿ ವಿಸ್ತರಣೆಗೆ ಸಹಕಾರಿಯಾಗಲಿದೆ,” ಎಂದು ರೋಲರ್ ಸ್ಕೇಟಿಂಗ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ನರೇಶ್ ಶರ್ಮಾ ಹೇಳಿದ್ದಾರೆ.
ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ
೬೦ನೇ ಆವೃತ್ತಿಯ ಚಾಂಪಿಯನ್‌ಷಿಪ್‌ಗೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ ಪಡೆದುಕೊಂಡಿದೆ.
ನಟ ಶ್ರೀನಗರ ಕಿಟ್ಟಿ ಶುಭಾಶಯ
ಸ್ಯಾಂಡಲ್‌ವುಡ್ ನಟ ಶ್ರೀನಗರ ಕಿಟ್ಟಿ ಅವರು ಚಾಂಪಿಯನ್‌ಷಿಪ್‌ಗೆ ಶುಭಾಶಯ ಕೋರಿದ್ದಾರೆ. ಲೋಗೊ ಅನಾವರಣ ಮಾಡಿರುವ ಅವರು, ರಾಷ್ಟ್ರ ಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕ್ರೀಡಾ ಪ್ರೇಮಿಗಳಿಗೆ ಮನವಿ ಮಾಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಕೂಡ ಶುಭಾಶಯ ಕೋರಿದ್ದರು, ಚಾಂಪಿಯನ್‌ಷಿಪ್ ಯಶಸ್ವಿಯಾಗಿ ನಡೆಯಲಿ ಎಂದ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ | ವಾರದ ವ್ಯಕ್ತಿ ಚಿತ್ರ | ಐಒಎ ಗದ್ದುಗೆ ಏರಲಿದೆ ಗುಡಿಸಲಲ್ಲಿ ಅರಳಿದ ಹೂವು; ಪಿ ಟಿ ಉಷಾ ಮುಡಿಗೆ ಇನ್ನೊಂದು ಗರಿ