Site icon Vistara News

Mega Millet Expo: ಬೆಂಗಳೂರಿನಲ್ಲಿ ಗಮನ ಸೆಳೆದ ʼಸಿರಿಧಾನ್ಯ ಮೇಳʼ; ಸಾವಿರಾರು ಮಂದಿ ಭೇಟಿ

Mega Millet Expo

ಬೆಂಗಳೂರು: ನಗರದ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಡಿ.9ರಿಂದ 11ರವರೆಗೆ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ, ಸಾವಯವ ಹಾಗೂ ಪ್ರಾಕೃತಿಕ ರೈತ ಸಮಾವೇಶವು (Mega Millet Expo) ಯಶಸ್ವಿಯಾಗಿ ನಡೆದಿದೆ. ಮೇಳವನ್ನು ವೀಕ್ಷಿಸಲು ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು.

ಶ್ರೀ ಶ್ರೀ ನೈಸರ್ಗಿಕ್‌ ಮತ್ತು ಪ್ರಣವ್‌ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿಸಿದ್ದ ಮೇಳವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಉದ್ಘಾಟಿಸಿದರು. ಮೇಳದಲ್ಲಿದ್ದ 180 ಸಣ್ಣ ಮಳಿಗೆಗಳು ಗಮನ ಸೆಳೆದವು. ಇವುಗಳಲ್ಲಿ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಸಾವಯವ ಕೃಷಿ, ಪ್ರಾಕೃತಿಕ ಕೃಷಿಗೆ ಅವಶ್ಯಕವಾದ ವಸ್ತುಗಳ ವಿವರಣೆ, ಬೀಜಗಳು, ಮಾರಾಟದ ವ್ಯವಸ್ಥೆ, ಹೆಚ್ಚು ಫಸಲನ್ನು ಪಡೆಯಲು ಕಳೆಗಿಡಗಳ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಖ್ಯಾತ ಖಾದ್ಯಗಳಾದ ಉಪ್ಪಿನಕಾಯಿ, ಸಿಹಿತಿಂಡಿಗಳು, ಫಾಸ್ಟ್‌ ಫುಡ್‌, ಹಿಟ್ಟು ಇತ್ಯಾದಿಗಳನ್ನು ಸಾವಿರಾರು ಜನರು ಖರೀದಿಸಿದರು.

ಇದನ್ನೂ ಓದಿ | Winter Foods: ಚಳಿಯಲ್ಲಿ ಮೆದುಳಿನ ಆರೈಕೆಗೆ ಬೇಕು ಈ ಆಹಾರಗಳು

ಇತ್ತೀಚಿನ ದಿನಗಳಲ್ಲಿ ಸೂಪರ್ ಫುಡ್‌ಗಳು ಹೇಗೆ ಫ್ಯಾಶನ್ ಆಗಿದೆ ಎಂದು ತಜ್ಞರು ವಿವರಿಸಿದರು. ರೈತರು, ರೈತ ಉತ್ಪಾದಕರ ಸಂಘಗಳು, ಫುಡ್ ಪ್ರಾಸೆಸ್ಸಿಂಗ್ ಸಂಘಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದವು. ಪ್ರತಿ ದಿನ ಸುಮಾರು 15,000 ಜನರು ಮೇಳದಲ್ಲಿ ಭಾಗವಹಿಸಿದ್ದು, 50,000 ಜನರು ಮೂರು ದಿವಸಗಳ ಮೇಳದ ಪ್ರಯೋಜನ ಪಡೆದಿದ್ದಾರೆ.

ಹಸಿವು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಿರಿಧಾನ್ಯಗಳ ಪಾತ್ರ ಮಹತ್ವದ್ದು ಎನ್ನುವ ಸಂಗತಿಯನ್ನು ವಿಶ್ವವೇ ಅರ್ಥ ಮಾಡಿಕೊಂಡಿದೆ. ಅದೇ ಕಾರಣಕ್ಕೆ ಭಾರತದ ಮನವಿಯನ್ನು ವಿಶ್ವಸಂಸ್ಥೆ ಒಪ್ಪಿಕೊಂಡು, 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ | Winter Vegetable: ಕಪ್ಪು ಕ್ಯಾರೆಟ್‌ ಎಂಬ ಸರ್ವಗುಣ ಸಂಪನ್ನ: ಇದು ಚಳಿಗಾಲದ ಸ್ಪೆಷಲ್!

ಮೇಳದಲ್ಲಿ ಸಿರಿಧಾನ್ಯ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಆಧಾರಿತ ಕೃಷಿ ಮೇಳ ಹಾಗೂ ವಿಚಾರ ಸಂಕಿರಣ ನಡೆಯಿತು. ಸಂಕಿರಣದಲ್ಲಿ ಅನೇಕ ವಿಧ್ವಾಂಸರು, ಸಂಶೋಧಕರು, ಆಹಾರ ಮತ್ತು ಕೃಷಿ ಕ್ಷೇತ್ರದ ವೃತ್ತಿಪರರು, ಶಿಕ್ಷಣ ತಜ್ಞರು, ಪೌಷ್ಟಿಕ ತಜ್ಞರು ಭಾಗವಹಿಸಿದ್ದರು. ಇನ್ನು ಸಿರಿಧಾನ್ಯ ಬೇಳೆಯುವ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಐವರು ಯಶಸ್ವೀ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version