ಬೆಂಗಳೂರು: ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮತ್ತು ಸ್ಮಾಲ್ ಫಾರ್ಮರ್ಸ್ ಅಗ್ರಿ-ಬಿಸಿನೆಸ್ ಕನ್ಸಾರ್ಷಿಯಮ್(SFAC)ಯ ಸಹಭಾಗಿತ್ವದಲ್ಲಿ ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿಯಿಂದ ಮಾರ್ಚ್ 1ರಿಂದ 3ರವರೆಗೆ ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯ ಸಫಿನಾ ಪ್ಲಾಜಾದಲ್ಲಿ ಆಯೋಜಿಸಿರುವ ‘ತರಂಗ್’ ಮೇಳಕ್ಕೆ (TARANG Mela) ಶುಕ್ರವಾರ ಚಾಲನೆ ನೀಡಲಾಯಿತು.
ಮೇಳದಲ್ಲಿ ಕರ್ನಾಟಕದ ಗ್ರಾಮೀಣ ಒಳನಾಡಿನ ಸ್ವಸಹಾಯ ಸಂಘಗಳ ಮಹಿಳೆಯರು, ರೈತರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಸಿರಿಧಾನ್ಯಗಳ ಉತ್ಪನ್ನಗಳು, ಕಸೂತಿ ನೇಯ್ಗೆಗಳು, ಚನ್ನಪಟ್ಟಣದ ಆಟಿಕೆಗಳು ಮುಂತಾದ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಉತ್ಪಾದಕ ಸಂಸ್ಥೆಗಳು ಮತ್ತು ಸ್ವಸಹಾಯ ಸಂಘಗಳ 42 ಮಳಿಗೆಗಳನ್ನು ಏರ್ಪಡಿಸಲಾಗಿದೆ.
ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ), ಕೃಷಿಯೇತರ ಉತ್ಪಾದಕರ ಸಂಸ್ಥೆ(ಒಎಫ್‌ಪಿಒ) ಮತ್ತು ಸ್ವಸಹಾಯ ಸಂಘ (ಎಸ್‌ಎಚ್‌ಜಿ)ಗಳ ಎಲೆಮರೆಯ ಯಶಸ್ಸು ಮತ್ತು ಸಾಧನೆಗಳನ್ನು ಪ್ರದರ್ಶಿಸುವ ಈ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಬಾರ್ಡ್ ಅನ್ನು ಅಭಿನಂದಿಸಿದರು.
ಇದನ್ನೂ ಓದಿ | Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಸ್ವಸಹಾಯ ಸಂಘ ಮತ್ತು ಮಹಿಳಾ ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ಮಹಿಳಾ ಸಬಲೀಕರಣದಲ್ಲಿ ನಬಾರ್ಡ್‌ನ ಪ್ರಯತ್ನಗಳನ್ನು ಶ್ಲಾಘಿಸಿದ ಡಾ. ಶಾಲಿನಿ ರಜನೀಶ್ ಅವರು, ಮಹಿಳಾ ಉದ್ಯಮಿಗಳು ಮತ್ತು ರೈತರಿಗೆ ಉಚಿತ ವೇದಿಕೆಯನ್ನು ಒದಗಿಸಿದ ಈ ಮೇಳವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಮತ್ತು ‘ಸೇರ್ಪಡೆಗೆ ಸ್ಫೂರ್ತಿ’ ಎಂಬ ವಿಷಯವನ್ನು ಕಾರ್ಯರೂಪಕ್ಕೆ ತರಲು ಅತ್ಯಂತ ಸೂಕ್ತವಾದ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಟಿ.ರಮೇಶ್ ಅವರು ಮಾತನಾಡಿ, ಕೃಷಿ ಸಂಬಂಧಿತ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಬೆಳೆಯುತ್ತಿರುವ ವಾಣಿಜ್ಯೀಕರಣದಿಂದ ಲಾಭ ಪಡೆಯಲು ನೆರವಾಗಲು ಎಫ್‌ಪಿಒಗಳು ಮತ್ತು ಕೃಷಿಯೇತರ ಉತ್ಪಾದಕರ ಸಂಸ್ಥೆಗಳ (ಒಎಫ್‌ಪಿಒ) ರೂಪದಲ್ಲಿ ಮಹಿಳಾ ರೈತರು ಮತ್ತು ಕುಶಲಕರ್ಮಿಗಳು ಸೇರಿದಂತೆ ಉತ್ಪಾದಕರ ಒಗ್ಗೂಡಿಸುವಿಕೆಯನ್ನು ಉತ್ತೇಜಿಸುತ್ತಿದೆ ಎಂದು ತಿಳಿಸಿದರು. ನಬಾರ್ಡ್ ರಾಜ್ಯದಲ್ಲಿ ಇದುವರೆಗೆ 381 FPOಗಳು ಮತ್ತು 05 OFPO ಗಳನ್ನು ಪೋಷಿಸಿದೆ. ನಬಾರ್ಡ್‌ನ ಅಭಿವೃದ್ಧಿ ಉಪಕ್ರಮಗಳು ನಬಾರ್ಡ್ ಪ್ರಾಯೋಜಿಸಿರುವ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ ಎಫ್‌ಪಿಒಗಳ ಷೇರುದಾರರಾಗಿರುವ 02 ಲಕ್ಷಕ್ಕೂ ಹೆಚ್ಚು ರೈತರಲ್ಲಿ ಉದ್ಯಮಶೀಲತೆಯ ಉತ್ಸಾಹವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು.
ಒಟ್ಟಾಗಿ, ಈ FPOಗಳು ಇದುವರೆಗೆ ರೂ. 20.73 ಕೋಟಿ ಶೇರು ಬಂಡವಾಳವನ್ನು ಕ್ರೋಡೀಕರಿಸಿವೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದಲ್ಲಿ ಭಾಗವಹಿಸುವ ಸ್ವಸಹಾಯ ಸಂಘಗಳು, ಕುಶಲಕರ್ಮಿಗಳು ಮತ್ತು ರೈತರಿಗೆ ತಮ್ಮ ಬೆಂಬಲ ನೀಡಬೇಕೆಂದು ಅವರು ಹುರಿದುಂಬಿಸಿದರು.
ಟಿ ರಮೇಶ್ ಅವರ ಪ್ರಕಾರ, ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನದ ವಿಷಯವು ಮಹಿಳೆಯರಲ್ಲಿ ಹೂಡಿಕೆ ಮಾಡುವ ಮೂಲಕ ಪ್ರಗತಿಯ ವೇಗವರ್ಧಿಸುವುದರ ಮೇಲೆ ಕೇಂದ್ರೀಕರಿಸಿದೆ. ಮಹಿಳಾ ಉದ್ಯಮಿಗಳಿಗೆ ಅವಕಾಶವನ್ನು ನೀಡಲು ಹಾಗೂ ತಮ್ಮ ಪ್ರಯತ್ನಗಳನ್ನು ಪ್ರದರ್ಶಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲು ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಇಂತಹ ಮೇಳಗಳನ್ನು ಆಯೋಜಿಸಲು ನಬಾರ್ಡ್ ನಿರ್ಧರಿಸಿದೆ.
NABFINS ಎಂಡಿ ಡಾ. ದಿವಾಕರ ಹೆಗ್ಡೆ ಅವರು ಮಾತನಾಡಿ, ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಎಲ್ಲಾ ಪಾಲುದಾರರನ್ನು ಅಭಿನಂದಿಸಿದರು ಮತ್ತು ಮೇಳವು ಅದ್ಧೂರಿಯಾಗಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಎಸ್‌ಎಲ್‌ಬಿಸಿ ಸಂಚಾಲಕರಾದ ಎಂ.ಭಾಸ್ಕರ್ ಚಕ್ರವರ್ತಿ ಅವರು “ತರಂಗ್ 2024”ರ ಮಳಿಗೆಗಳಲ್ಲಿ ಪ್ರದರ್ಶಿಸಲಾದ ಉತ್ಪನ್ನಗಳನ್ನು ಮೆಚ್ಚಿದರು ಮತ್ತು ನಬಾರ್ಡ್‌ನ ಪ್ರಯತ್ನಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ | Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?
ರಾಜ್ಯಾದ್ಯಂತದ ಗ್ರಾಮೀಣ ಮಹಿಳಾ ಉದ್ಯಮಿಗಳ ಯಶಸ್ಸಿನ ಕಥೆಗಳನ್ನು ಬಣ್ಣಿಸುವ “ಇನ್ ಹರ್ ಸ್ಟ್ರೈಡ್” ಹೆಸರಿನ ಕಿರು ಪುಸ್ತಕವನ್ನು ಸಹ ನಬಾರ್ಡ್ ಬಿಡುಗಡೆ ಮಾಡಿತು. ಇದೇ ಸಂದರ್ಭದಲ್ಲಿ ನಬಾರ್ಡ್‌ನ ರಾಜ್ಯದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಏಳು ಫಲಾನುಭವಿಗಳನ್ನು ಗಣ್ಯರು ಸನ್ಮಾನಿಸಿದರು.