Site icon Vistara News

T.V. Venkatachala Sastry: ತೋಗೆರೆಯ ತೇರು ನನ್ನ ಅಣ್ಣ

T V. Venkatachala Sastry

| ಟಿ.ವಿ. ಭುವನೇಶ್ವರಿ ಸುಂದರೇಶ, ಬೆಂಗಳೂರು

“ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಹೇ ದೇವ” ಎಂಬ ಕವನದಂತೆ ಸದ್ದಿಲ್ಲದೆ ಕೆಲಸ ಮಾಡುತ್ತಲೇ ಸಂತಸ ಪಡುವ ಕನ್ನಡ ಮೇರು, ಸಾಹಿತ್ಯ ಸೂರಿ, ವಿದ್ವಾಂಸ ಡಾ.ಟಿ. ವಿ. ವೆಂಕಟಾಚಲಶಾಸ್ತ್ರಿಯವರು (T.V. Venkatachala Sastry) ತೊಂಬತ್ತೊಂದರ ಹುಟ್ಟುಹಬ್ಬಕ್ಕೆ ಕಾಲಿರಿಸುತ್ತಿದ್ದಾರೆ. ಶ್ರೀಮುಖ ಸಂವತ್ಸರದ ( 1933- ಆಗಸ್ಟ್- 26) ರಂದು ಜನಿಸಿದ ಶ್ರೀ ವೆಂಕಟಾಚಲಶಾಸ್ತ್ರಿಗಳ ನಿಘಂಟಿನಲ್ಲಿ ಅಹಂ ಎನ್ನುವ ಪದಕ್ಕೆ ಜಾಗವೇ ಇಲ್ಲ. ಕನ್ನಡ ಸಾರಸ್ವತ ಲೋಕದ ಕಣ್ಮಣಿ ಪ್ರಶಸ್ತಿಗಳ ಸರದಾರನಾದರೂ ಸರಳತೆಯೇ ಮೈವೆತ್ತವರು. ʼನಿಘಂಟುʼ ಎಂಬ ಪದ ಈ ಸಂದರ್ಭದಲ್ಲಿ ನನಗೊಂದು ಸ್ವಾರಸ್ಯಕರ ಪ್ರಸಂಗವನ್ನು ನೆನಪಿಗೆ ತರುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಘಂಟು ರಚನೆ ಕಾರ್ಯದಲ್ಲಿ ಶ್ರೀ ಜಿ. ವಿ. ವೆಂಕಟಸುಬ್ಬಯ್ಯನವರು ಕೆಲಸ ಮಾಡುವಾಗ ಯಾವುದಾದರೂ ಶಬ್ಧ ನಿರ್ಣಯದ ಸಂದರ್ಭ ಬಂದಾಗ ಟಿ.ವಿ. ವೆಂಕಟಾಚಲಶಾಸ್ತ್ರಿಗಳು ಮಾಡಿದ ಒಂದು ಸಲಹೆ ಜಿ.ವಿ.ಯವರಿಗೆ ಸರಿಯಾಗಿದೆ ಎನ್ನಿಸದಾಗ, ʼವ್ಯಾಕರಣ ಇದನ್ನು ಒಪ್ಪುವುದಿಲ್ಲʼ ಎನ್ನುತ್ತಿದ್ದರು. ಇದಾದ ನಂತರ ಒಂದು ನಿಮಿಷವೂ ಇಲ್ಲ. ಇಂಥದ್ದೇ ಒಂದು ಸಂದರ್ಭದಲ್ಲಿ ಜಿಜಿಯವರು ತಮ್ಮ ಸಲಹೆಯ ಕುರಿತು ಮಾನ್ಯ ಸದಸ್ಯರ ಮುಂದೆ ಇಟ್ಟರು. ಆಗ ಟಿ.ವಿ. ವೆಂಕಟಾಚಲಶಾಸ್ತ್ರಿಗಳು, ʼವ್ಯಾಕರಣ ಇದನ್ನು ಸಮರ್ಥಿಸುವುದಿಲ್ಲʼ ಎಂದರು.

ಆಗ ಜಿವಿಯವರು ʼಈ ವಿಷಯ ನಮಗೆ ಉಭಯ ಸಮಾನವಾದದ್ದುʼ ಎಂದು ಹೇಳಿದ್ದಲ್ಲದೆ, ಮುಂದೆ ಇಂತಹದ್ದೇ ಸಂದರ್ಭ ಬಂದಾಗ ಜಿವಿಯವರು ಹಾಗೂ ಟಿವಿಯವರ ಸಲಹೆಗಳು ಪರಸ್ಪರ ಏಕೀಭಾವದಿಂದ ಒಪ್ಪಿತವಾಗಿರುವ ಸಂದರ್ಭಗಳೂ ಇದ್ದವು. ಅಂತಹ ಒಂದು ಸಂದರ್ಭದಲ್ಲಿ ಜಿವಿಯವರು “ಆಹಾ! ಈಗಲೀಗ ವಿಶ್ವಾಮಿತ್ರನು ವಸಿಷ್ಠನಿಂದ ಬ್ರಹ್ಮರ್ಷಿ ಎನ್ನಿಸಿಕೊಂಡ” ದು ಉದ್ಗಾರ ತೆಗೆದರಂತೆ. ಎರಡು ಮಹಾ ಚೈತನ್ಯಗಳ ಪರಸ್ಪರ ಗೌರವ ಅಭಿಮಾನಗಳು ಹೀಗಿರುತ್ತಿದ್ದವು.

ಸಂಬಂಧಿಕರೊಬ್ಬರ ಮನೆಯ ಕಾರ್ಯಕ್ರಮ, ಮಲ್ಲೇಶ್ವರದ ಒಂದು ದೊಡ್ಡ ಸಭಾಂಗಣದಲ್ಲಿ ನಡೆಯಿತು. ಕುಟುಂಬದ ಬಂಧು ಬಾಂಧವರೆಲ್ಲ ಒಂದುಗೂಡಿ ಸೇರಿ ಸಂಭ್ರಮಿಸಿದ್ದರು. ಕಾರ್ಯಕ್ರಮದ ಅಂಗವಾಗ ಸಂಗೀತಗಾರರಾದ ಶ್ರೀ ನಾಗರಾಜ ಹವಾಲ್ದಾರರ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಅದೃಷ್ಟವೋ ಎಂಬಂತೆ ಶ್ರೀ ನಾಗರಾಜ್ ಹವಾಲ್ದಾರ್ರ ಪರಿಚಯ ಮಾಡಿಕೊಡುವ ಭಾಗ್ಯ ನನ್ನ ಪಾಲಿಗೆ ಬಂತು. ಆ ನಿರೂಪಣೆ ನನ್ನ ಪಾಲಿಗೆ ಅನಿರೀಕ್ಷಿತವಾಗಿ ಬಂದಿತ್ತು. ಶ್ರೀ ನಾಗರಾಜ್ ಹವಾಲ್ದಾರರ ಬಗ್ಗೆ ವಿಚಾರ ತಿಳಿದಿದ್ದರಿಂದ ಕಷ್ಟವೆನಿಸಲಿಲ್ಲ. ನಿರೂಪಣೆಯ ಹವ್ಯಾಸವಿದ್ದದ್ದರಿಂದ ಭಯ ಕೂಡ ಅನ್ನಿಸಲಿಲ್ಲ.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ನೀಲಿ ನಕ್ಷೆ

ನನ್ನ ಭಾಗದ ನಿರೂಪಣೆ ಮುಗಿದು ವೇದಿಕೆಯಿಂದ ಕೆಳಗಿಳಿದಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಪಾಂಡಿತ್ಯ ದಿಗ್ಗಜರನ್ನು ಆಗ ಗಮನಿಸಿದೆ. ಅಲ್ಲಿಯವರೆಗೂ ಇದ್ದ ಧೈರ್ಯ ಅಲ್ಲೇ ಕುಸಿಯಿತು. ಹಸನ್ಮುಖಿಗಳಾಗಿ ಕುಳಿತಿದ್ದವರು ಜಿವಿ ಹಾಗೂ ಟಿವಿಯವರೇ ಆಗಿದ್ದರು. ಆಗ ಟಿವಿಯವರು “ಏಯ್ ಬಾ ಇಲ್ಲಿ” ಎಂದು ಕರೆದರು. ಮನಸ್ಸಿನಲ್ಲಿಯೇ ನಡುಗುತ್ತ ಹತ್ತಿರ ಹೋಗಿ ನಿಂತೆ. “ಇಲ್ಲಿ ನೋಡು ಜಿ. ವೆಂಕಟಸುಬ್ಬಯ್ಯನವರರು ಏನೋ ಹೇಳಬೇಕಂತೆ” ಎಂದರು. ಧಡಗುಟ್ಟುತ್ತಿರುವ ಹೃದಯದೊಡನೆ ಅಲ್ಲಿಯೇ ನಿಂತೆ. “ಒಂದೂ ಅಪಭ್ರಂಶದ ಮಾತಿಲ್ಲದೆ, ತುಂಬಾ ಚೆನ್ನಾಗಿ ನಿರೂಪಣೆ ಮಾಡಿದೆಯಮ್ಮ” ಎಂದು ಬೆನ್ನು ತಟ್ಟಿದರು. ಜೀವನದಲ್ಲಿ ಅಂತಹ ದಿಗ್ಗಜರೊಡನೆ ಮಾತನಾಡುವುದೇ ಸುಕೃತ ಎಂದು ಭಾವಿಸಿದ್ದ ನನಗೆ ಅವರ ಹಾರೈಕೆಯೂ ದಕ್ಕಿತ್ತು ಅಲ್ಲವೆ.

ಅಂದು ಜಿ. ವೆಂಕಟಸುಬ್ಬಯ್ಯನವರ ಪಕ್ಕದಲ್ಲಿ ಕುಳಿತು ನನ್ನ ಕರೆದವರು ನನ್ನ ಹಿರಿಯ ಸಹೋದರ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿಗಳು. ಹೂ ಮನದ ನನ್ನ ಅಣ್ಣನಿಗೆ ಈದಿನ ಹುಟ್ಟುಹಬ್ಬ. ಅವರು ಶತಮಾನೋತ್ಸವವನ್ನ ಆಚರಿಸಿಕೊಳ್ಳಲಿ ಎಂದು ನನ್ನ ತುಂಬು ಹೃದಯದ ಹಾರೈಕೆಗಳು.

Exit mobile version