Site icon Vistara News

Traffic Restrictions: ಐಪಿಎಲ್‌ ಕ್ರಿಕೆಟ್‌; ಈ ರೋಡ್‌ನಲ್ಲಿ ಅಪ್ಪಿತಪ್ಪಿಯೂ ಪಾರ್ಕಿಂಗ್ ಮಾಡಬೇಡಿ

IPL 2024

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮ್ಯಾಚ್ (IPL 2024) ಇರುವ ಕಾರಣ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ (Traffic Restrictions) ನಿರ್ಬಂಧವಿದೆ. ಶನಿವಾರದಂದು ಬೆಂಗಳೂರಿನಲ್ಲಿ ಆರ್‌ಸಿಬಿ vs ಜಿಟಿ ಪಂದ್ಯಾವಳಿ ನಡೆಯಲಿದೆ. ಹೀಗಾಗಿ ಕ್ರೀಡಾಂಗಣದ ಸುತ್ತಲಿನ ಕೆಲವು ರಸ್ತೆಗಳಲ್ಲಿ ಸಂಚಾರಿ ವ್ಯವಸ್ಥೆಗಳ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 03:00 ಗಂಟೆಯಿಂದ ರಾತ್ರಿ 11:00 ಗಂಟೆಯವರೆಗೆ ಈ ನಿಯಮಗಳು ಅನ್ವಯವಾಗಲಿದೆ.

ವಾಹನಗಳ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ ಹೀಗಿದೆ

ಕ್ಲೀನ್ಸ್ ರಸ್ತೆ, ಎಂ.ಜಿ ರಸ್ತೆ, ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್‌ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ. ಲ್ಯಾವೆಲ್ಲೆ ರಸ್ತೆಯೊಂದಿಗೆ ವಿಠಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುವಂತಿಲ್ಲ.

ಬೇರೆ ಎಲ್ಲಿ ಪಾರ್ಕಿಂಗ್‌ ಮಾಡಬಹುದು?

ಸಾರ್ವಜನಿಕರು ತಮ್ಮ ವಾಹನಗಳ ನಿಲುಗಡೆ ಮಾಡಲು ಸ್ಥಳಗಳನ್ನು ನಿಯೋಜನೆ ಮಾಡಲಾಗಿದೆ. ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಯು.ಬಿ ಸಿಟಿ ಪಾರ್ಕಿಂಗ್‌, ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮೊದಲನೆ ಮಹಡಿ ಮತ್ತು ಹಿಲ್ಸ್ ಕೆ.ಜಿ.ಐ.ಡಿ ಬಿಲ್ಡಿಂಗ್, ಕಿಂಗ್ಸ್ ರಸ್ತೆ, (ಕಬ್ಬನ್ ಪಾರ್ಕ್ ಒಳಭಾಗ)ದಲ್ಲಿ ಪಾರ್ಕಿಂಗ್‌ ಮಾಡಬಹುದಾಗಿದೆ.

ಇದನ್ನೂ ಓದಿ: IPL 2024: ಬರೋಬ್ಬರಿ 12 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಗೆಲುವು ಸಾಧಿಸಿದ ಕೆಕೆಆರ್​

ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

ಬೆಂಗಳೂರು: ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ವರದಿ ಕೇಳಿತ್ತು. ಇದೀಗ ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್‌ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ, ಹೀಗಾಗಿ ಬೆಂಗಳೂರಿನನಲ್ಲಿ ನಡೆಯುವ ಪಂದ್ಯಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿ ಬಂದಿತ್ತು. ಈ ವೇಳೆ ಕೆಎಸ್​ಸಿಎ ಆಡಳಿತ ಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದ ನೀರು ಬಳಕೆ ಮಾಡುಲಾಗುತ್ತದೆ ಎಂದು ಹೇಳಿ ಪಂದ್ಯವಾವಳಿಯನ್ನು ನಡೆಸಿತ್ತು.

ಈ ವೇಳೆ ಸ್ಪಷ್ಟನೆ ನೀಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್, ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಯೋಗ್ಯವಾದ ನೀರನ್ನು ಬಳಸುವುದಿಲ್ಲ. ನೀರಿನ ಮೌಲ್ಯ ಏನೆಂಬುವುದು ನಮಗೆ ತಿಳಿದಿದೆ. ಎಸ್‌ಟಿಪಿ ಘಟಕದ ನೀರನ್ನು ನಾವು ಬಳಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಆದೇಶಿಸಿ ಮೇ 2ಕ್ಕೆ ಎರಡನೇ ಹಂತದ ವಿಚಾರಣೆಯನ್ನು ನಿಗದಿಪಡಿಸಿತ್ತು.

ಇದೀಗ ವಿಚಾರಣೆ ನಡೆದಿದ್ದು, ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ. ಮುಂದಿನ ವಿಚಾರಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದು ಈ ವೇಳೆಗಾಗಲೇ ಐಪಿಎಲ್​ ಪಂದ್ಯ ಕೂಡ ಮುಕ್ತಾಯ ಕಂಡಿರುತ್ತದೆ. ಹೀಗಾಗಿ ಈ ಬಾರಿಯ ಆರ್​ಸಿಬಿ ಪಂದ್ಯಗಳಿಗೆ ಯಾವುದೇ ಅಡ್ಡಿ ಉಂಟಾಗದು. ಚಿನ್ನಸ್ವಾಮಿಯಲ್ಲಿ ಇನ್ನು ಕೇವಲ 2 ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ಒಂದು ಪಂದ್ಯ ಇಂದು(ಶನಿವಾರ) ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version