Site icon Vistara News

ಪ್ರಭಾವಿಗಳ ಕೈಚಳಕ! ಉದ್ಯಮಿ ಆದಿಕೇಶವಲು ಪುತ್ರನ ಬಂಧಿಸಿದ್ದ ಎನ್‌ಸಿಬಿ ಅಧಿಕಾರಿ ವರ್ಗಾವಣೆ

ಎನ್‌ಸಿಬಿ ಅಧಿಕಾರಿ

ಬೆಂಗಳೂರು : ಮಾದಕ ವಸ್ತು ವ್ಯಸನ ಪ್ರಕರಣದಲ್ಲಿ ದಿವಂಗತ ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್‌ ಬಂಧಿಸಿದ್ದ ಎನ್‌ಸಿಬಿ ಅಧಿಕಾರಿ ಅಮಿತ್‌ ಗವಾಟೆಯವರನ್ನು ವರ್ಗಾವಣೆ ಮಾಡಲಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಹೆಸರಾಗಿರುವ ಹಲವು ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಶ್ರೀನಿವಾಸ್‌ ಹೊಂದಿದ್ದು, ಅಮಿತ್‌ ವರ್ಗಾವಣೆಯಲ್ಲಿ ಈ ರಾಜಕಾರಣಿಗಳ ಪ್ರಭಾವ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

ಹೈದರಾಬಾದ್‌ನಿಂದ ಬರುವಾಗ ಡ್ರಗ್ಸ್‌ ಸರಬರಾಜು ಮಾಡಿಕೊಂಡ ಆರೋಪದಡಿಯಲ್ಲಿ ದಾಳಿ ನಡೆಸಿದ್ದ ಎನ್‌ಸಿಬಿ ಝೋನಲ್ ಡೈರೆಕ್ಟರ್‌ ಅಮಿತ್‌ ನೇತೃತ್ವದ ತಂಡ ಶ್ರೀನಿವಾಸ್‌ರನ್ನು ಬಂಧಿಸಿತ್ತು. ವಿಚಾರಣೆ ಮುಕ್ತಾಯಗೊಂಡು ಆರೋಪಿಯನ್ನು 14 ದಿನಗಳ ಕಾಲ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಇದರ ಬೆನ್ನೆಲ್ಲೇ ಅಮಿತ್ ಗವಾಟೆಯನ್ನು ಮುಂಬೈ ವಲಯಕ್ಕೆ ವರ್ಗಾವಣೆಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ | ಪೊಲೀಸ್‌ ವರ್ಗಾವಣೆಯಲ್ಲೂ ಲಂಚ : ಬಿಜೆಪಿ ಶಾಸಕನ ಬಾಯಿಂದಲೇ ಹೊರಬಂದ ಸತ್ಯ !

ಹೈದಾರಾಬಾದ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶ್ರೀನಿವಾಸ್‌ ಸಾದಹಳ್ಳಿ ಗೇಟ್‌ನ ಬಳಿ ಕಾರಿನಲ್ಲಿ ಬರುವಾಗ ಟಿವಿಎಸ್‌ ಸ್ಕೂಟರ್‌ನಲ್ಲಿ ಬಂದಿದ್ದ ಗೀರೀಶ್‌ ಎಂಬಾತ ಶ್ರೀನಿವಾಸ್‌ಗೆ ಕೋಕೈನ್‌ ತಂದುಕೊಟ್ಟಿದ್ದ. ಡ್ರಗ್ಸ್‌ ನೀಡುತ್ತಿದ್ದಂತೆ ಎನ್‌ಸಿಬಿ ಅಧಿಕಾರಿಗಳು ಸುತ್ತುವರೆದು ವಶಕ್ಕೆ ಪಡೆದುಕೊಂಡಿದ್ದರು.

ಕೇಂದ್ರ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಜೊತೆ ಕೂಡ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದ ಶ್ರೀನಿವಾಸ್‌ನ್ನು ಬಂಧಿಸಿ ಜೈಲಿಗಟ್ಟಿದ್ದ ಅಮಿತ್ ಗವಾಟೆಯನ್ನು ವರ್ಗಾವಣೆ ಮಾಡಲು ಇದು ಕಾರಣವಿರಬಹುದೆಂಬ ಸಂಶಯ ವ್ಯಕ್ತವಾಗಿದೆ.  

ಇದನ್ನೂ ಓದಿ | ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಗೌರವ್‌ ಗುಪ್ತ ಸ್ಥಾನಕ್ಕೆ ತುಷಾರ್ ಗಿರಿನಾಥ್: 15 IAS ಅಧಿಕಾರಿಗಳ ವರ್ಗಾವಣೆ

Exit mobile version