Site icon Vistara News

ಸಂಚಾರ ಉತ್ಕೃಷ್ಟತಾ ಕೇಂದ್ರಕ್ಕೆ Uber ಕಂಪನಿ ಮುಂದೆ ಬಂದರೆ ನೆರವು: ಅಶ್ವತ್ಥನಾರಾಯಣ ಭರವಸೆ

ಬೆಂಗಳೂರು: ಸಂಚಾರ ಕ್ಷೇತ್ರಕ್ಕೆ ಸಂಬಂಧಿಸಿಂತೆ ಉತ್ಕೃಷ್ಟತಾ ಕೇಂದ್ರವನ್ನು (ಸೆಂಟರ್ ಆಫ್ ಎಕ್ಸಲೆನ್ಸ್) ಸ್ಥಾಪಿಸುವ ಅಗತ್ಯವಿದ್ದು, ಇದಕ್ಕಾಗಿ ಉಬರ್ ಕಂಪನಿ ಮುಂದೆ ಬಂದರೆ ಸರ್ಕಾರ ನೆರವು ನೀಡಲು ಸಿದ್ಧವಿದೆ ಎಂದು ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಹೇಳಿದರು.

ಉಬರ್ ಗ್ಲೋಬಲ್ ಟೆಕ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದಲ್ಲಿ ಸಂಚಾರ ಸಮಸ್ಯೆಯೇ ನಂಬರ್ ಒನ್ ಸವಾಲಿನ ಸಮಸ್ಯೆಯಾಗಿದೆ. ಕಂಪನಿಯು ಸಿಎಸ್ಆರ್ ಅಡಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವ ಬಗ್ಗೆ ಆಲೋಚಿಸಬೇಕು. ಬೆಂಗಳೂರು ಸೇರಿದಂತೆ ಯಾವುದೇ ದೊಡ್ಡ ನಗರದಲ್ಲಿ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವುದು ವ್ಯವಸ್ಥೆ ಮುಂದಿರುವ ಪ್ರಮುಖ ಸವಾಲು. ತಂತ್ರಜ್ಞಾನ ಬಳಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ಭರವಸೆ ಮೂಡಿಸುವ ರೀತಿಯಲ್ಲಿ Uber ಕೆಲಸ ಮಾಡುತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಸ್ಥಾಪಿಸಲು ಉಬರ್‌ ಸಂಸ್ಥೆ ಮುಂದೆ ಬಂದರೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | ಬೆಂಗಳೂರು ಮೇಲೆ KTR ಕಣ್ಣು: ಹೈದರಾಬಾದಿಗೆ ಬನ್ನಿ ಎಂದ ತೆಲಂಗಾಣ ಸಚಿವ

ನಾವು ಗಳಿಸಿದ ಜ್ಞಾನವು ಉತ್ಪನ್ನವಾಗಿ ಪರಿವರ್ತನೆಯಾಗಿ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಉಪಯೋಗಕ್ಕೆ ಲಭ್ಯವಾಗುವುದು ಮುಖ್ಯ. ಹೊಸದಾಗಿ ಜಾರಿಗೆ ತರಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಇದನ್ನು ಗಮನದಲ್ಲಿರಿಸಿಕೊಂಡು ರೂಪುಗೊಂಡಿದೆ. ನರ್ಸರಿಯಿಂದ ಪಿಜಿವರೆಗಿನ ಶಿಕ್ಷಣದಲ್ಲಿ ಇದು ಬದಲಾವಣೆ ತಂದು ನಮ್ಮ ಯುವಕರನ್ನು ಜಾಗತಿಕವಾಗಿ ಸ್ಪರ್ಧಿಸಲು ಸಜ್ಜುಗೊಳಿಸುತ್ತದೆ. ಉದ್ದಿಮೆಗಳಿಗೆ ಸೂಕ್ತ ಕೌಶಲಗಳಿರುವ ಮಾನವ ಸಂಪನ್ಮೂಲದ ಲಭ್ಯತೆಯನ್ನು ಇದು ಖಾತ್ರಿಗೊಳಿಸುತ್ತದೆ. ಇದಕ್ಕಾಗಿಯೇ ಇಂಟರ್ನ್ ಶಿಪ್ ಅವಧಿಯನ್ನು 6 ವಾರಗಳಿಂದ – 36 ವಾರಗಳಿಗೆ ಹೆಚ್ಚಿಸಲಾಗಿದೆ. ಎಲ್ಲಾ ಕೋರ್ಸ್ ಗಳಿಗೂ ಫ್ಯೂಚರ್ ಸ್ಕಿಲ್ಸ್ ಗಳನ್ನು ಸಂಯೋಜನೆಗೊಳಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

https://vistaranews.com/2022/05/02/ashwathnarayan-on-dk-shivakumar/
Exit mobile version