Site icon Vistara News

Udupa Music Festival: ಬೆಂಗಳೂರಿನಲ್ಲಿ ಫೆ.16ರಿಂದ ಉಡುಪ ಸಂಗೀತೋತ್ಸವ; ವಿಶ್ವ ವಿಖ್ಯಾತ ಕಲಾವಿದರ ಸಂಗಮ

Udupa Music Festival

ಬೆಂಗಳೂರು: ರಾಜಧಾನಿ ಈಗ ಮತ್ತೊಂದು ಸಂಗೀತ ಉತ್ಸವಕ್ಕೆ ಅಣಿಯಾಗಿದೆ. ಉಡುಪ ಪ್ರತಿಷ್ಠಾನವು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಫೆ. 16, 17 ಮತ್ತು 18ರಂದು ಹಮ್ಮಿಕೊಂಡಿರುವ ಉಡುಪ ಸಂಗೀತೋತ್ಸವ 5ನೇ ಆವೃತ್ತಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾ ದಿಗ್ಗಜರು ತಮ್ಮ ಅದ್ಭುತ ಪ್ರೌಢಿಮೆಯನ್ನು ಒರೆಗೆ ಹಚ್ಚುವ ಮೂಲಕ ಉತ್ಸವ (Udupa Music Festival) ಸಂಪನ್ನಗೊಳಿಸಲಿರುವುದು ಬಹು ವಿಶೇಷ. ಕಲಾ ರಸಿಕರಿಗೆ ಇದು ಭೂರೀ ಭೋಜನವಾಗಲಿರುವುದು ಮಹತ್ವದ ಸಂಗತಿ.

ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ನಲ್ಲಿ ವಿಶ್ವದ ಪ್ರತಿಷ್ಠಿತ ಗ್ರಾೃಮಿ ಅವಾರ್ಡ್ ಕಿರೀಟ ಮುಡಿಗೇರಿಸಿಕೊಂಡ ಜಾಗತಿಕ ತಬಲಾ ಮಾಂತ್ರಿಕ ಪಂಡಿತ್ ಉಸ್ತಾದ್ ಝಾಕೀರ್ ಹುಸೇನ್ ಅವರು ಫೆ. 16ರ ಸಂಜೆ 7ಕ್ಕೆ ಪಂಡಿತ್ ನೀಲಾದ್ರಿ ಕುಮಾರ್ ಸಿತಾರ್ ವಾದನಕ್ಕೆ ಜುಗಲ್ ಬಂದಿಯಾಗಲಿದ್ದಾರೆ.

ಫೆ. 17ರ ಸಂಜೆ 6ಕ್ಕೆ ಸ್ತ್ರೀ ತಾಳ ತರಂಗದ ‘ಲಯ ರಾಗ ಸಮರ್ಪಣಂ’ ರಂಜಿಸಲಿದೆ. ಮಹಿಳಾ ಕಲಾವಿದರೇ ಇದಕ್ಕೆ ಸಾಕ್ಷಿಯಾಗಲಿದ್ದು, ವಿದುಷಿ ಸುಕನ್ಯಾ ರಾಮಗೋಪಾಲ್ ಘಟ ತರಂಗ್, ವಿದುಷಿಯರಾದ ವೈ.ಜಿ. ಶ್ರೀಲತಾ ವೀಣೆ, ಜಿ. ಲಕ್ಷ್ಮೀ ಮೃದಂಗ, ಭಾಗ್ಯಲಕ್ಷ್ಮಿ ಎಂ. ಕೃಷ್ಣ ಅವರು ಮೋರ್ಚಿಂಗ್ ವಾದನ ಮೇಳೈಸಲಿದೆ. ಸಂಜೆ 7ಕ್ಕೆ ಮತ್ತೊಬ್ಬ ಗಾಯನ ಮೇರು ವಿದ್ವಾಂಸ ಟಿ. ಎಂ. ಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಪಕ್ಕವಾದ್ಯದಲ್ಲಿ ವಿದ್ವಾನ್ ಎಚ್.ಕೆ. ವೆಂಕಟರಾಮ್ ಪಿಟೀಲು, ಉಮಯಾಳ್ಪರಂ ಕೆ. ಶಿವರಾಮನ್ ಅವರು ಮೃದಂಗ, ಕಾರ್ತಿಕ್ ಅವರು ಘಟ ಪಕ್ಕವಾದ್ಯ ಸಾಥ್ ನೀಡಲಿದ್ದಾರೆ.

ಅರುಣಾ ಸಾಯಿರಾಂ ಗಾಯನ

ಫೆ. 18ರ ಸಂಜೆ 7ಕ್ಕೆ ವಿದುಷಿ ಅರುಣಾ ಸಾಯಿರಾಂ ಗಾಯನ ಮಾಧುರ್ಯವಿದೆ. ಈ ಸಂದರ್ಭ ಪೂರ್ವ ಮತ್ತು ಪಾಶ್ಚಿಮಾತ್ಯ ನಾಡಿನ ಪ್ರಮುಖ ವಾದ್ಯಗಳು ಅನುರಣಿಸಲಿವೆ. ತ್ರಿಲೋಕ್ ಗುರ್ತು ಅವರು ಡ್ರಮ್ಸ್, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲು, ಮಹೇಶ ಕಾಳೆ ಗಾಯನ, ಕೀತ್ ಪೀಟರ್ಸ್ ಬಾಸ್ ಗಿಟಾರ್, ಮಿಗಿಲ್ ಚೌಹಾಸ್ಕಿ ಅವರ ಫ್ಲಮೆಂಕೋ ಗಿಟಾರ್, ಅರುಣ್ ಕುಮಾರ್ ಅವರ ಡ್ರಮ್ಸ್, ಪ್ರಮಥ ಕಿರಣ್ ಅವರ ಪರ್ಕ್ಯೂಶನ್ಸ್ ಮತ್ತು ಸಂಗೀತ್ ಹಳದೀಪುರ ಅವರು ಕೀಬೋರ್ಡ್ ನುಡಿಸಿ ರಂಜಿಸಲಿದ್ದಾರೆ.

ಇದನ್ನೂ ಓದಿ | Govt Employees Conference: ಬೆಂಗಳೂರಿನಲ್ಲಿ ಫೆ.27ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ

ದಾಖಲೆ ನಿರ್ಮಿಸಲಿದೆ ಸಂಗೀತ ಉತ್ಸವ

ತಬಲಾ ಮೇರು ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರು ವಿಶ್ವ ಮಟ್ಟದ ಗ್ರಾೃಮಿ ಅವಾರ್ಡ್ ಪುರಸ್ಕೃತರಾದ ನಂತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಛೇರಿ ನೀಡಲು ಸಮ್ಮತಿಸಿದ್ದು, ಶ್ರೋತೃಗಳ ಸುಕೃತವೇ ಆಗಿದೆ. ಇವರೊಂದಿಗೆ ಕಲಾ ಕೋವಿದರೂ ಸಂಗಮಗೊಂಡಿರುವುದು ಮಹತ್ವದ ಸಂಗತಿ. ಹಾಗಾಗಿ ಉದ್ಯಾನ ನಗರಿಯಲ್ಲಿ ಉಡುಪ ಸಂಗೀತ ಉತ್ಸವದ 5ನೇ ಆವೃತ್ತಿ ಒಂದು ಹೊಸ ಮೈಲಿಗಲ್ಲನ್ನೇ ಸ್ಥಾಪಿಸಲಿದೆ. ಎಂದು ಆಯೋಜಕ ಮತ್ತು ಪ್ರಖ್ಯಾತ ಘಟ ವಿದ್ವಾಂಸ ಗಿರಿಧರ ಉಡುಪ ಸಂಭ್ರಮದಿಂದಲೇ ಹೇಳುತ್ತಾರೆ.

Exit mobile version