Site icon Vistara News

UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

UGCET 2024

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ (UGCET 2024) ವಿಕಲಚೇತನಾ ಕೋಟಾದಲ್ಲಿ ಮೀಸಲಾತಿ ಕ್ಲೇಮ್‌ ಮಾಡಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆಯು ಜೂ.10 ಸೋಮವಾರದಿಂದ ಆರಂಭವಾಯಿತು. ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ನಡೆಯುತ್ತಿರುವ ವೈದ್ಯಕೀಯ ತಪಾಸಣೆಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಚಾಲನೆ ನೀಡಿದರು.

ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯಿಂದ ಬಂದಿದ್ದ ಆರು ಮಂದಿ ಮೂಳೆ ರೋಗ ಮತ್ತು ಕಣ್ಣು- ಮೂಗು-ಕಿವಿ (ಇಎನ್ ಟಿ) ತಜ್ಞ ವೈದ್ಯರು ಅಭ್ಯರ್ಥಿಗಳನ್ನು ತಪಾಸಣೆ ಮಾಡಿ, ದಾಖಲೆಗಳನ್ನು ಪರಿಶೀಲಿಸಿದರು. ಇದನ್ನು ಖುದ್ದು ಪ್ರಸನ್ನ ಅವರು ಮೇಲ್ವಿಚಾರಣೆ ನಡೆಸಿದರು.

ಇನ್ನೂ ಸಿಇಟಿಗೆ ಅರ್ಜಿ ಸಲ್ಲಿಸುವಾಗ ಒಟ್ಟು 783 ಮಂದಿ ವಿಕಲಚೇತನರ ಕೋಟಾದಲ್ಲಿ ಮೀಸಲಾತಿ ಕ್ಲೇಮ್‌ ಮಾಡಿದ್ದು, ಅಷ್ಟೂ ಮಂದಿಗೆ ಇದೇ 12ರ ವರೆಗೆ ತಪಾಸಣೆ ನಡೆಸಲಾಗುತ್ತದೆ. ಮೊದಲ ದಿನ 250 ಮಂದಿಗೆ ಬರಲು ಸೂಚಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

UGCET 2024

ಕಣ್ಣಿನ ಸಮಸ್ಯೆ ಇರುವವರ ತಪಾಸಣೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಅಲ್ಲಿಗೆ ಕೆಇಎ ಸಿಬ್ಬಂದಿಯೇ ಅಂತಹವರನ್ನು ವಾಹನದಲ್ಲಿ ಕರೆದೊಯ್ಯುವ ಕೆಲಸ ಮಾಡಲಾಗಿದೆ. ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಕಲಚೇತನರ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಿಮವಾಗಿರಲಿದೆ.

ದಾಖಲೆ ಏನು ತರಬೇಕು?

ಯುಜಿಸಿಇಟಿ ಅರ್ಜಿಯ ಪ್ರತಿ, ಪ್ರವೇಶ ಪತ್ರ, ಅಭ್ಯರ್ಥಿಯ ಭಾವಚಿತ್ರ ಇರುವ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರ, ಕಿವುಡುತನದ ಸಮಸ್ಯೆ ಇರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರಗಳನ್ನು ತಪಾಸಣೆ ಸಂದರ್ಭದಲ್ಲಿ ತಂದಿರಬೇಕು. ಅಭ್ಯರ್ಥಿಗಳು ಬೆಳಗ್ಗೆ 9:30ಕ್ಕೆ ವರದಿ ಮಾಡಿಕೊಳ್ಳಬೇಕು. 10 ಗಂಟೆಯಿಂದ ವೈದ್ಯಕೀಯ ತಪಾಸಣೆ ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version