ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳಿಗೆ ವಿಕಲಚೇತನಾ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ (UGCET 2024) ಜೂನ್ 10 ರಿಂದ 12ರವರೆಗೆ ವೈದ್ಯಕೀಯ ತಪಾಸಣೆಯನ್ನು (Medical Test) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಆಯೋಜಿಸಿದೆ. ಅಭ್ಯರ್ಥಿಗಳು ಬೆಳಗ್ಗೆ 9:30ಕ್ಕೆ ವರದಿ ಮಾಡಿಕೊಳ್ಳಬೇಕು. 10 ಗಂಟೆಯಿಂದ ವೈದ್ಯಕೀಯ ತಪಾಸಣೆ ನಡೆಯಲಿದೆ.
ಬೆಂಗಳೂರಿನ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ತಜ್ಞ ವೈದ್ಯರು ಅಭ್ಯರ್ಥಿಗಳನ್ನು ತಪಾಸಣೆ ಮಾಡಲಿದ್ದಾರೆ. ಸಿಇಟಿಗೆ ಅರ್ಜಿ ಸಲ್ಲಿಸುವಾಗ ಒಟ್ಟು 783 ಮಂದಿ ವಿಕಲಚೇತನರ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿದ್ದು, ಅಷ್ಟೂ ಮಂದಿಗೆ ಮೂರು ದಿನಗಳ ಕಾಲ ತಪಾಸಣೆ ನಡೆಸಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ತಪಾಸಣೆಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮಗೆ ಸೂಚಿಸಿದ ದಿನಾಂಕಗಳಂದು ಖುದ್ದು ವೈದ್ಯಕೀಯ ತಪಾಸಣೆಗೆ ಬರಬೇಕು. ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಕಲಚೇತನರ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಿಮವಾಗಿರಲಿದೆ.
ತಪಾಸಣೆ ವೇಳೆ ಅಭ್ಯರ್ಥಿಗಳು ಏನೆಲ್ಲ ತರಬೇಕು?
ಯುಜಿಸಿಇಟಿ ಅರ್ಜಿಯ ಪ್ರತಿ, ಪ್ರವೇಶ ಪತ್ರ, ಅಭ್ಯರ್ಥಿಯ ಭಾವಚಿತ್ರ ಇರುವ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರ, ಕಿವುಡುತನದ ಸಮಸ್ಯೆ ಇರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರಗಳನ್ನು ತಪಾಸಣೆ ಸಂದರ್ಭದಲ್ಲಿ ತಂದಿರಬೇಕು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ