ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಎಂಜಿನಿಯರಿಂಗ್ (UGCET 2024) ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಎರಡನೇ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ಸಂಜೆ ಪ್ರಕಟಿಸಿದೆ.
ಕೆಇಎ ವೆಬ್ ಸೈಟ್‌ನಲ್ಲಿ ಅಣಕು ಫಲಿತಾಂಶ ಲಭ್ಯ ಇದ್ದು, ಅದನ್ನು ನೋಡಿದ ನಂತರ ಆಗಸ್ಟ್ 27ರ ಬೆಳಗ್ಗೆ 11ರವರೆಗೆ ಅಭ್ಯರ್ಥಿಗಳು ತಮ್ಮ ಇಚ್ಛೆಯನುಸಾರ ಕಾಲೇಜು/ಕೋರ್ಸ್ ಗಳನ್ನು ಅಧಿಕೃತ ಮೊದಲ ಸುತ್ತಿನ ಆಯ್ಕೆಗೆ ಬದಲಿಸಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಗದಿಯಂತೆ ಮೊದಲ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶವನ್ನು ಸೆ.1ರಂದು ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಆಗಸ್ಟ್ 22ರ ಸಂಜೆ 5ಗಂಟೆವರೆಗೆ ಆದ್ಯತಾ ಕ್ರಮದಲ್ಲಿ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಅಣಕು ಸೀಟು ಹಂಚಿಕೆಯನ್ನು ಮಾಡಲಾಗಿದೆ. ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್‌ಸಿ (ನರ್ಸಿಂಗ್), ಬಿ-ಫಾರ್ಮ, ಫಾರ್ಮ್-ಡಿ ಇತ್ಯಾದಿ ಕೋರ್ಸುಗಳ ಸೀಟು ಹಂಚಿಕೆಯನ್ನು ಮಾಡಲಾಗಿದೆ.
ಇದನ್ನೂ ಓದಿ: UGCET 2024: ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ರಿಸ್ಟಲ್ ಅನೌನ್ಸ್; ಆಪ್ಶನ್ ಎಂಟ್ರಿಗೆ ಇವತ್ತೆ ಲಾಸ್ಟ್
ಇಲ್ಲಿಯವರೆಗೆ ಇಚ್ಚೆ / ಆಯ್ಕೆಗಳನ್ನು ದಾಖಲಿಸದೇ ಇರುವ ಅರ್ಹ ಅಭ್ಯರ್ಥಿಗಳು ಇಷ್ಟವಿದ್ದಲ್ಲಿ ಆ.27ರ ಬೆಳಗ್ಗೆ 11ರೊಳಗೆ ಮೊದಲನೆ ಸುತ್ತಿನ ಸೀಟು ಹಂಚಿಕೆಗೆ ಕಾಲೇಜು ಮತ್ತು ಕೋರ್ಸುಗಳ ಆಯ್ಕೆಗಾಗಿ ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದರು.
ಅಭ್ಯರ್ಥಿಗಳು ಕೇಳಬಹುದಾದ ಪುನರಾವರ್ತಿತ ಪ್ರಶ್ನೆಗಳನ್ನು ಕ್ರೋಡೀಕರಿಸಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಉತ್ತರಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಅದನ್ನು ಓದಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ಭೇಟಿ ನೀಡಬಹುದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ