ಬೆಂಗಳೂರು: ಯುಜಿಸಿಇಟಿ 2024ರ (UGCET 2024) ಮೊದಲ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಆಗಸ್ಟ್ 9ರ ಸಂಜೆ 6ಗಂಟೆ ನಂತರ ಕೆಇಎ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ಕುರಿತು ಕೆಇಎ ಟ್ವೀಟ್ (ಎಕ್ಸ್) ಮೂಲಕ ತಿಳಿಸಿದೆ.
ಇಂಜಿನಿಯರಿಂಗ್ (Engineering) ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ (UGCET 2024) ಪ್ರವೇಶಕ್ಕೆ ತಮ್ಮ ಆಸಕ್ತಿಗನುಗುಣವಾಗಿ ಆಪ್ಷನ್ ದಾಖಲಿಸಿರುವ ಸಿಇಟಿ ರ‍್ಯಾಂಕಿಂಗ್ (CET Ranking) ಅಭ್ಯರ್ಥಿಗಳಿಗೆ ಇಂದು (August 9) ಸಂಜೆ 6 ಗಂಟೆಗೆ ಅಣಕು ಸೀಟು ಹಂಚಿಕೆ (Mock Seat Sharing) ಫಲಿತಾಂಶ ಪ್ರಕಟಗೊಳ್ಳಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕುರಿತು ಅಪ್‌ಡೇಟ್ ನೀಡಲಿದೆ.
ಅಭ್ಯರ್ಥಿಗಳಿಗೆ ತಮ್ಮ ಆಪ್ಷನ್ ದಾಖಲಿಸಲು ಆಗಸ್ಟ್ 4 ಕೊನೆಯ ದಿನವಾಗಿತ್ತು. ಇಂಜಿನಿಯರಿಂಗ್, ಯೋಗ, ನ್ಯಾಚುರೋಪಥಿ, ಪಶುವೈದ್ಯ, ನರ್ಸಿಂಗ್, ಕೃಷಿ ವಿಜ್ಞಾನ, ಬಿ -ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಆಪ್ಷನ್ ಮೂಲಕ ನಡೆದಿದೆ. ಇಂದು ಅಣಕು ಸೀಟು ಹಂಚಿಕೆ ಬಳಿಕ ನೈಜ ಸೀಟು ಹಂಚಿಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಮೊದಲು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಲಾಗಿತ್ತು. ಜು.30ರಂದು ಕೊನೆಯಾಗಲಿದ್ದ ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ಮತ್ತೂ ವಿಸ್ತರಿಸಲಾಗಿತ್ತು. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.
ಇದನ್ನೂ ಓದಿ: Karnataka Weather : ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ
ವಿವಿಧ ಕಂಡಿಕೆಗಳಡಿ ಕ್ಲೇಮ್ ಮಾಡಿದವರಿಗೆ ಆ.9ರವರೆಗೆ ದಾಖಲೆ ಪರಿಶೀಲನೆ
ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್- ಕ್ಲೇಮ್ ಮಾಡಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ನಿಗದಿತ ದಿನಾಂಕಗಳಂದು ದಾಖಲೆಗಳ ಪರಿಶೀಲನೆಗೆ ಹಾಜರಾಗದೇ ಇದ್ದರೆ ಅಂತಹವರು ಆಗಸ್ಟ್ 9ರವರೆಗೆ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದೇ ಇದ್ದಲ್ಲಿ ಅಂತಹವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗುವುದಿಲ್ಲ.
ಸಿಇಟಿ ಪರಿಶೀಲನಾ ಅರ್ಜಿಯೇ ಸಾಕು
ಈ ಮೇಲ್ಕಂಡ ಕಂಡಿಕೆಗಳಲ್ಲಿ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆಯಾ ದಿನವೇ ಪರಿಶೀಲನಾ ಪತ್ರ (ವೆರಿಫಿಕೇಷನ್ ಸ್ಲಿಪ್) ನೀಡಿದ್ದು, ಅದನ್ನೇ ಯುಜಿನೀಟ್ ಪ್ರವೇಶಕ್ಕೂ ಬಳಸಬಹುದು. ಯುಜಿಸಿಇಟಿ ಅರ್ಜಿಗೆ ಯುಜಿನೀಟ್ ರೋಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಮತ್ತು ಅರ್ಜಿ ಪ್ರತಿಯನ್ನು ಮುದ್ರಣ ಮಾಡಿಕೊಳ್ಳಬೇಕು. ಅಂತಹವರು ಯುಜಿನೀಟ್ ವೆರಿಫಿಕೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುಜಿಸಿಇಟಿ ವೆರಿಫಿಕೇಷನ್ ಸ್ಲಿಪ್ ನಲ್ಲಿ ಮುದ್ರಿತವಾಗಿರುವ ಸೀಕ್ರೆಟ್ ಕೀ ಮತ್ತು ಅರ್ಜಿ ಸಂಖ್ಯೆಯನ್ನೇ ನಮೂದಿಸಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳಿಗೆ ಇಚ್ಛೆಗಳನ್ನು (ಆಪ್ಷನ್) ದಾಖಲಿಸಬಹುದು. ಇದಕ್ಕೆ ಸದ್ಯದಲ್ಲೇ ಪೋರ್ಟಲ್ ಅನ್ನು ತೆರೆಯಲಾಗುವುದು. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ