ಬೆಂಗಳೂರು: ಯುಜಿಸಿಇಟಿ-24ರ (UGCET 2024) ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಪಶು ವೈದ್ಯಕೀಯ ಇತ್ಯಾದಿ ಕೋರ್ಸುಗಳ ಪ್ರವೇಶಕ್ಕೆ ಆಪ್ಶನ್ (ಆಯ್ಕೆ) ಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಏಳು ದಿನ ಅವಕಾಶ ನೀಡಿತ್ತು. ಅದರಲ್ಲಿ ಐದು ದಿನಗಳು ಈಗಾಗಲೇ ಮುಗಿದಿದ್ದು, ಆಪ್ಶನ್ ಎಂಟ್ರಿ ಮಾಡಲು ಇನ್ನೂ ಎರಡು ದಿನಗಳು ಮಾತ್ರ ಬಾಕಿ ಇದೆ. ಜು.29 ಕೊನೆಯ ದಿನ.
ಎಂಜಿನಿಯರಿಂಗ್ ಹಾಗೂ ಇತರೆ ಕೋರ್ಸುಗಳಿಗೆ ಆಪ್ಶನ್ (ಆಯ್ಕೆ) ಗಳನ್ನು ದಾಖಲಿಸಲು ಜುಲೈ 23ರಿಂದ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಅಭ್ಯರ್ಥಿಗಳು ಎಚ್ಚರಿಕೆಯಿಂದ ತಮ್ಮ ಇಚ್ಛೆಗಳನ್ನು ದಾಖಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದರು.
ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ / ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿತ್ತು. ಆಪ್ಶನ್‌ಗಳನ್ನು ದಾಖಲಿಸುವ ಬಗ್ಗೆ, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬಹುದಾಗಿದೆ.
ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಲಿಂಕ್ ನೀಡಲಾಗಿದ್ದು, ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಆಯ್ಕೆ/ಇಚ್ಛೆಗಳ ದಾಖಲೆಗೆ ನಿಗದಿಪಡಿಸಿದ ಕೊನೆ ದಿನದ ನಂತರ ಮೂರು ದಿನಗಳ ಬಳಿಕ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಅದರ ನಂತರ ಮೂರು ದಿನ ಆಯ್ಕೆಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಮೂರು ದಿನಗಳ ಬಳಿಕ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.
ಚಟುವಟಿಕೆಗಳ ವಿವರ ಹೀಗಿದೆ
-ಜು.23ರಿಂದಲೇ Option Entry ಪೋರ್ಟಲ್ ತೆರೆಯಲಾಗಿದೆ. ಅಭ್ಯರ್ಥಿಗಳು ಆದ್ಯತಾ ಕ್ರಮದಲ್ಲಿ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು. ಆಯ್ಕೆಗಳನ್ನು ದಾಖಲಿಸಲು 7 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಇಂದಿಗೆ ಐದು ದಿನಗಳು ಮುಗಿದಿದ್ದು, ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ.
-ಇಚ್ಛೆ/ಆಯ್ಕೆಗಳನ್ನು ದಾಖಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದ 3 ದಿನಗಳ ನಂತರ ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು.
-ಅಣುಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರ ಇಚ್ಛೆ-ಆಯ್ಕೆಗಳನ್ನು ಸೇರಿಸಲು/ಅಳಿಸಲು/ಬದಲಾಯಿಸಲು/ಮಾರ್ಪಡಿಸಲು 3 ದಿನಗಳ ಕಾಲಾವಕಾಶ ನೀಡಲಾಗುತ್ತದೆ.
ಈ ಮೇಲಿನ ಪ್ರಕ್ರಿಯೆ ಮುಕ್ತಾಯವಾದ 3 ದಿನಗಳ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು.
ವೈದ್ಯಕೀಯ ಕೋರ್ಸುಗಳು:
ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಅದರಂತೆ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಆಪ್ಶನ್‌ಗಳನ್ನು ಸೇರಿಸುವ ಬಗ್ಗೆ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಆನ್‌ಲೈನ್ ವೆರಿಫಿಕೇಶನ್
ಯುಜಿಸಿಇಟಿ-2024ಕ್ಕೆ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ ಮಾಹಿತಿಯನ್ನು ಆಯಾ ಇಲಾಖೆಯ ವೆಬ್‌ಸರ್ವೀಸ್ ಮೂಲಕ ಪರಿಶೀಲನೆ ಮಾಡಿ, ಪ್ರಾಧಿಕಾರದ ವೆಬ್‌ಸೈಟ್‌ನ ಲಿಂಕ್‌ನಲ್ಲಿ ಪರಿಶೀಲಿಸಿಕೊಳ್ಳಲು ಜು.29ರಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಜತೆಗೆ ಅರ್ಜಿಯಲ್ಲಿನ ವಿವರಗಳು ತಪ್ಪಾಗಿದ್ದಲ್ಲಿ ಸರಿಪಡಿಸಿಕೊಳ್ಳಲು ಅಂತಿಮ ಅವಕಾಶ ನೀಡಿ ಆಫ್‌ಲೈನ್ ದಾಖಲೆಗಳ ಪರಿಶೀಲನೆಗೆ ಕಳೆದ ಜು.4ರಿಂದ 6ವರೆಗೆ ಅವಕಾಶ ನೀಡಲಾಗಿತ್ತು. ಬಳಿಕ ಜು.18ರಂದು ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್ ನೀಡಲಾಗಿತ್ತು. ಇದನ್ನೂ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Paris Olympics: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮೊದಲ ಡೋಪಿಂಗ್ ಪ್ರಕರಣ ಪತ್ತೆ; ಜೂಡೊಪಟು ತಾತ್ಕಾಲಿಕ ಅಮಾನತು
ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇಂದೇ ಕೊನೆ ದಿನ
ಡಿಸಿಇಟಿ-2024 ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಅಛಿ ಆಯ್ಕೆಗೆ, ಚಲನ್ ಡೌನ್‌ಲೋಡ್, ಶುಲ್ಕ ಪಾವತಿ ಮತ್ತು ಕಾಲೇಜಿನಲ್ಲಿ ಪ್ರವೇಶ ಪಡೆಯಲು ದಿನಾಂಕವನ್ನು ವಿಸ್ತರಿಸಲಾಗಿತ್ತು. ಜತೆಗೆ ದಿನಾಂಕಗಳನ್ನು ಮತ್ತೊಮ್ಮೆ ವಿಸ್ತರಿಸಲಾಗುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿತ್ತು.
ಅದರಂತೆ ಅಛಿ ಗಳನ್ನು ಆಯ್ಕೆ ಮಾಡಲು ನಿನ್ನೆ 26ರ ಮಧ್ಯಾಹ್ನ 1ರ ವರೆಗೆ ಹಾಗೂ ಚಲನ್ ಡೌನ್‌ಲೋಡ್ ಮಾಡಿಕೊಳ್ಳಲು 2 ರವರೆಗೆ, ಶುಲ್ಕ ಪಾವತಿ ಮಾಡಲು ಸಂಜೆ 4 ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ದಿನ ಅಂದರೆ 27ರ ಮಧ್ಯಾಹ್ನ 1ರ ವರೆಗೆ ಅಛಿ-1 ಆಯ್ಕೆ ಮಾಡಿ, ಶುಲ್ಕ ಪಾವತಿಸಿ ಮತ್ತು ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಂಜೆ 4.30 ರವರೆಗೆ ಅವಕಾಶವಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ