Site icon Vistara News

ರೇವಾ ವಿವಿಯಲ್ಲಿ ಜಿಯೋಪಾಲಿಟಿಕ್ಸ್, ಇಂಟರ್ ನ್ಯಾಷನಲ್ ಸ್ಟಡೀಸ್ ಉನ್ನತ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Reva University

ಬೆಂಗಳೂರು: ನಗರದ ರೇವಾ ವಿಶ್ವವಿದ್ಯಾಲಯಲ್ಲಿ ಜಿಯೋಪಾಲಿಟಿಕ್ಸ್ ಹಾಗೂ ಇಂಟರ್ ನ್ಯಾಷನಲ್ ಸ್ಟಡೀಸ್‌ಗಾಗಿ ಸ್ಥಾಪಿಸಿರುವ ರೇವಾ ಎಕ್ಸಲೆನ್ಸ್ ಸೆಂಟರ್ ಅನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಹಾಗೂ ನಗರ ವ್ಯವಹಾರಗಳ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಬುಧವಾರ ಉದ್ಘಾಟಿಸಿದರು.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರಿಗೆ ಎನ್‌ಸಿಸಿಯಿಂದ ಗೌರವ ಸಮರ್ಪಣೆ ಮಾಡುವುದರ ಮೂಲಕವಾಗಿ ಶೈಕ್ಷಣಿಕ ಕೇಂದ್ರದ ಆರಂಭೋತ್ಸವ ಕಾರ್ಯಕ್ರಮ ಚಾಲನೆ ಪಡೆಯಿತು. ಈ ವೇಳೆ ಕೇಂದ್ರ ಸಚಿವರಿಗೆ ರೇವಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪಿ. ಶ್ಯಾಮ ರಾಜು, ಪ್ರೊ ಚಾನ್ಸೆಲರ್ ಉಮೇಶ್ ಎಸ್. ರಾಜು ಅವರು ಗೌರವ ಅರ್ಪಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಕುಲಪತಿ ಪಿ. ಶ್ಯಾಮ ರಾಜು ಅವರು, ರೇವಾ ವಿಶ್ವವಿದ್ಯಾಲಯದ ಪಾಲಿಗೆ ಇದು ಐತಿಹಾಸಿಕ ಕ್ಷಣವಾಗಿದೆ. ಜಿಯೋಪಾಲಿಟಿಕ್ಸ್ ಹಾಗೂ ಇಂಟರ್ ನ್ಯಾಷನಲ್ ಸ್ಟಡೀಸ್‌ಗಾಗಿ ರೇವಾ ಎಕ್ಸಲೆನ್ಸ್ ಸೆಂಟರ್ ಉದ್ಘಾಟಿಸುವ ಮೂಲಕ ಉನ್ನತ ಶಿಕ್ಷಣದಲ್ಲಿನ ಉತ್ಕೃಷ್ಟತೆಯನ್ನು ಅಳವಡಿಸಿಕೊಳ್ಳುವುದಕ್ಕೆ ರೇವಾ ವಿಶ್ವವಿದ್ಯಾಲಯಕ್ಕೆ ಇರುವ ಅಚಲವಾದ ಬದ್ಧತೆ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ | Job Fair : ಉದ್ಯೋಗ ಮೇಳದಲ್ಲಿ 9,651 ಮಂದಿಗೆ ನೇರ ಜಾಬ್‌; ಇನ್ನು ವಿಭಾಗ ಮಟ್ಟದಲ್ಲಿ ಜಾಬ್‌ ಫೇರ್‌

ಈ ಉನ್ನತ ಅಧ್ಯಯನ ಕೇಂದ್ರದ ಉದ್ಘಾಟನೆಯನ್ನು ಮಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ಅರ್ಪಿಸಿದ ಶ್ಯಾಮ ರಾಜು ಅವರು, ಸಚಿವರಿಗೆ ತಮ್ಮ ಈ ಹಿಂದಿನ ವೃತ್ತಿ ಹಾಗೂ ಶೈಕ್ಷಣಿಕ ಅಧ್ಯಯನದ ಹಿನ್ನೆಲೆಯಲ್ಲಿ ಅನುಮಾನವೇ ಇಲ್ಲದಂತೆ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಅವರಲ್ಲಿ ಇರುವಂಥ ಅನುಭವವನ್ನು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಜತೆಗೆ ಹಂಚಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹರ್ದೀಪ್ ಸಿಂಗ್ ಪುರಿ ಅವರು ಮಾತನಾಡಿ, ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ದೆಹಲಿ ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿರುವುದು ಬೌದ್ಧಿಕವಾಗಿ ಬಹಳ ತೃಪ್ತಿ ನೀಡಿದೆ. ಆದ್ದರಿಂದ ಇಂದಿನ ಕಾರ್ಯಕ್ರಮದ ಪ್ರಾಮುಖ್ಯತೆ ಅರಿತುಕೊಳ್ಳುವುದರಲ್ಲಿ ಶೈಕ್ಷಣಿಕ ಅನುಭವವು ಪ್ರಮುಖವಾಗಿದೆ. ಭಾರತವು ವಿಶ್ವದ ಮೂರನೇ ಅತಿ ಬಲಿಷ್ಠ ಆರ್ಥಿಕತೆ ಎತ್ತರಕ್ಕೆ ಏರಲಿದ್ದು, ಜಿಯೋಪಾಲಿಟಿಕ್ಸ್‌ನಲ್ಲಿ ಭಾರತವು ಕೇಂದ್ರ ಶಕ್ತಿಯಾಗಲಿದೆ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ತಿಳಿಸಿದರು.

ಇನ್ನು ಕಾರ್ಯಕ್ರಮದ ವೇಳೆ ಪ್ರಶ್ನೋತ್ತರಕ್ಕೆ ಸಹ ವೇದಿಕೆ ಒದಗಿಸಲಾಗಿತ್ತು. ಈ ವೇಳೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡುವ ಬಗ್ಗೆ ಕೇಂದ್ರ ಸಚಿವರನ್ನು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ಜಿಎಸ್‌ಟಿ ಸಮಿತಿಯಲ್ಲಿನ ನಿರ್ಧಾರಗಳು ಸರ್ವಾನುಮತದ ಮೇಲೆ ಆಧಾರವಾಗಿದೆ. ಇದರ ಸೇರ್ಪಡೆಗೆ ಸದಸ್ಯರ ಬೆಂಬಲ ಇಲ್ಲದಿರುವುದು ದೀರ್ಘಾವಧಿಯಲ್ಲಿ ಅನುಕೂಲಕರವಾಗಿ ಕಂಡುಬರುತ್ತದೆ ಎಂದರು.

ಇನ್ನು ಭಾಷಣಕಾರರಾಗಿ ಸಚಿವರ ವಾಕ್ ಚಾತುರ್ಯ ಇಷ್ಟು ಚೆನ್ನಾಗಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಪ್ರಕ್ರಿಯೆಯನ್ನು ಆನಂದಿಸುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ರಾಜತಾಂತ್ರಿಕ ವೃತ್ತಿಯಲ್ಲಿದ್ದು ಹಾಗೂ ಈಗ ಕೇಂದ್ರ ಸಚಿವರಾಗಿ ವಿವಿಧ ಜವಾಬ್ದಾರಿ, ವೃತ್ತಿಯ ಅನುಭವಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿದೆ ಎಂಬುದನ್ನು ತಿಳಿಸಿದರು.

ಭಾರತದಲ್ಲಿ ಫಾಸಿಲ್ ಇಂಧನದ ಭವಿಷ್ಯ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಾಯಕತ್ವದಲ್ಲಿ ಭಾರತವು ಅನ್ವೇಷಣೆ ಹಾಗೂ ಉತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹಸಿರು ಹೈಡ್ರೋಜನ್‌ನಲ್ಲಿ ಬಹಳ ಮುಂದೆ ಸಾಗಿದೆ ಮತ್ತು ಇದು ನಿಜವಾದ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ | Job Fair : ಉದ್ಯೋಗ ಮೇಳದಲ್ಲಿ 9,651 ಮಂದಿಗೆ ನೇರ ಜಾಬ್‌; ಇನ್ನು ವಿಭಾಗ ಮಟ್ಟದಲ್ಲಿ ಜಾಬ್‌ ಫೇರ್‌

ಪ್ರೊ ಚಾನ್ಸೆಲರ್ ಉಮೇಶ್ ಎಸ್. ರಾಜು ಅವರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವಂದನೆಗಳನ್ನು ಅರ್ಪಿಸುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು. ರೇವಾ ವಿಶ್ವವಿದ್ಯಾಲಯದ ಪ್ರಯಾಣದಲ್ಲಿ ಸಹಕರಿಸಿದ ಮಾಧ್ಯಮಗಳಿಗೆ ಕುಲಪತಿಗಳಾದ ಪಿ. ಶ್ಯಾಮ ರಾಜು ಕೃತಜ್ಞತೆ ಸಲ್ಲಿಸಿದರು.

Exit mobile version