Site icon Vistara News

ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ ಜತೆ ಇಲಿನಾಯ್ಸ್ ವಿವಿ ಒಪ್ಪಂದ; ಸಂಶೋಧನೆ, ಕೌಶಲಾಭಿವೃದ್ಧಿಗೆ ಸಹಕಾರ

University of Illinois signs MoU with Ramaiah University of Applied Sciences

ಬೆಂಗಳೂರು: ಅಮೆರಿಕದ ಇಲಿನಾಯ್ಸ್‌ ಮತ್ತು ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ಶೈಕ್ಷಣಿಕ ಮತ್ತು ಸಂಶೋಧನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಂಡಿವೆ. ಇಲಿನಾಯ್ಸ್‌ ವಿವಿ ಅಧ್ಯಕ್ಷ ಡಾ. ತಿಮೋತಿ ಕಿಲ್ಲಿನ್ ಅವರ ನೇತೃತ್ವದ ನಿಯೋಗವು ರಾಮಯ್ಯ ವಿಶ್ವವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿದೆ ವೇಳೆ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಆರ್. ಜಯರಾಂ ಮತ್ತು ಡಾ. ತಿಮೋತಿ ಕಿಲ್ಲಿನ್ ಒಡಂಬಡಿಕೆಗೆ ಸಹಿ ಮಾಡಿದರು.

ಈ ಒಡಂಬಡಿಕೆಯು ವಿಶೇಷವಾಗಿ ವಿದ್ಯಾರ್ಥಿಗಳ ಕೌಶಲ ಗುಣಮಟ್ಟ ಕಾಪಾಡಿಕೊಳ್ಳಲು ಸಹಾಯವಾಗಲಿದೆ. ಎಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಇಂಧನ ಸಂರಕ್ಷಣೆ, ಯಂತ್ರ ಕಲಿಕೆ ಕೌಶಲಾಭಿವೃದ್ಧಿಗೆ ಯೋಜನೆಯು ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಿದೆ.

ಒಪ್ಪಂದದ ಕುರಿತು ಮಾತನಾಡಿದ ಇಲಿನಾಯ್ಸ್ ಸಿಸ್ಟಮ್ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ. ತಿಮೋತಿ ಕಿಲ್ಲಿನ್, ಎಂಜಿನಿಯರಿಂಗ್ 4 ವರ್ಷಗಳಲ್ಲಿ ಕೊನೆಯ ವರ್ಷ ಅಮೆರಿಕದಲ್ಲಿ ಇಲ್ಲಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪದವಿ ಪಡೆಯುವ ಜತೆಗೆ ಅಮೆರಿಕದಲ್ಲಿಯೇ ಉದ್ಯೋಗ ಪಡೆಯಲು ಪೂರಕವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | SSLC And PUC Exam : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗೆ ಡೇಟ್‌ ಫಿಕ್ಸ್‌; ಏನಿದೆ ಈ ಬಾರಿ ಷರತ್ತುಗಳು

ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯವು ಬಹಳ ದೀರ್ಘಕಾಲದಿಂದ ಭಾರತದೊಂದಿಗೆ ಸಂಬಂಧ ಹೊಂದಿದೆ. 1910ರಲ್ಲಿ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಭೇಟಿ ನೀಡಿದ್ದರು. ಭಾರತದ ಆಧುನಿಕ ಕೃಷಿ ಬೆಳವಣಿಗೆಗೆ ಆಧುನಿಕ ತಂತ್ರಜ್ಞಾನಕ್ಕೆ 1950ರಿಂದ 1970ರ ವರೆಗೆ ನೆರವು ನೀಡಿದೆ. ಇದರ ಸಲುವಾಗಿ 1970ರಲ್ಲಿ ಹಳದಿ ಸೊಯಾಬಿನ್ ಪರಿಚಯಿಸಲು ಸಾಧ್ಯವಾಗಿತ್ತು. 2000ನೇ ಇಸವಿಯಿಂದ ಭಾರತದ 50 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, ಪ್ರಸ್ತುತ 4,900 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಚಿಕಾಗೋ ನಗರದ ಹೃದಯಭಾಗದಲ್ಲಿ ಡಿಸ್ಕವರಿ ಪಾರ್ಟ್ನರ್ ಇನ್‌ಸ್ಟಿಟ್ಯೂಟ್ (ಡಿಪಿಐ) ಸಂಸ್ಥೆಯನ್ನು ಹೊಂದಿದ್ದು, ಅಂತಾರಾಷ್ಟ್ರೀಯ ಸಹಯೋಗಗಳು ಸಂಶೋಧನೆ ಮತ್ತು ಅಭಿವೃದ್ಧಿ, ಅನ್ವೇಷಣೆ ಮತ್ತು ಕೌಶಲಾಭಿವೃದ್ಧಿಗೆ ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, 94,700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 27 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ 27 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಎಂದರು.

ರಾಮಯ್ಯ ಅಪ್ಲೈಡ್ ಸೈನ್ಸಸ್ ವಿಶ್ವವಿದ್ಯಾಲಯದ ಕುಲಪತಿ ಡಾ. MR ಜಯರಾಮ್ ಅವರು ಮಾತನಾಡಿ, ಎರಡು ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ನಡುವೆ ಜ್ಞಾನ ವಿನಿಮಯವನ್ನು ಉತ್ತೇಜಿಸುವಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯ ಮತ್ತು RUAS ನಡುವಿನ ನಿರಂತರ ಪಾಲುದಾರಿಕೆ ಬಗ್ಗೆ ಸ್ಮರಿಸಿ, ಕಳೆದ ಆರು ವರ್ಷಗಳಲ್ಲಿ ಮಾಡಿದ ಗಮನಾರ್ಹ ಪ್ರಗತಿ ಕುರಿತು ಮಾಹಿತಿ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಾರಂಭದೊಂದಿಗೆ, ಎರಡೂ ಸಂಸ್ಥೆಗಳು ಸಮಾಜದ ವಿಕಾಸದ ಅಗತ್ಯಗಳನ್ನು ಪೂರೈಸಲು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜ್ಞಾನವನ್ನು ಪ್ರಸಾರ ಮಾಡಲು ರಸ್ತೆಗಳನ್ನು ಅನ್ವೇಷಿಸಲು ಉತ್ಸುಕವಾಗಿವೆ ಎಂದು ತಿಳಿಸಿದರು.

ಇದನ್ನೂ ಓದಿ | Dharmendra Pradhan: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಎರಡು ಬಾರಿ 10, 12ನೇ ತರಗತಿ ಬೋರ್ಡ್‌ ಪರೀಕ್ಷೆ ಬರೆಯಲು ಅವಕಾಶ

ಕಾರ್ಯಕ್ರಮದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಆರ್ ಶ್ರೀನಿವಾಸ ಮೂರ್ತಿ, ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನ ಉಪಕುಲಪತಿ ಕುಲದೀಪ್ ಕೆ ರೈನಾ, ಇಲಿನಾಯ್ಸ್ ಚಿಕಾಗೋ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮೆಡಿಸಿನ್‌ನಲ್ಲಿ ಮೈಕ್ರೋಬಯಾಲಜಿ ಮತ್ತು ಇಮ್ಯುನಾಲಜಿ ವಿಭಾಗದ ಹಿರಿಯ ಸಹಾಯಕ ಡೀನ್ ಡಾ. ಬೆಳ್ಳೂರು ಪ್ರಭಾಕರ್ ಉಪಸ್ಥಿತರಿದ್ದರು.

Exit mobile version