Site icon Vistara News

Greenpeace India: ಬಸ್‌ ಪಥ ವಿಸ್ತರಣೆಗೆ ಜನರಿಂದ ಅಭೂತಪೂರ್ವ ಬೆಂಬಲ; ಗ್ರೀನ್‌ಪೀಸ್‌ ಇಂಡಿಯಾ ಸಮೀಕ್ಷೆ

Bus Priority Lane

ಬೆಂಗಳೂರು: ವಾಹನ ದಟ್ಟಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕೆ ಅನುವಾಗಲು ಹಾಗೂ ಬಸ್ ಪ್ರಯಾಣದ ಅವಧಿ ಕಡಿಮೆ ಮಾಡಲು ನಿರ್ಮಿಸಿರುವ ಪ್ರತ್ಯೇಕ ಬಸ್ ಆದ್ಯತಾ ಪಥ (Bus Priority Lane)ದಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಹೀಗಾಗಿ ರಾಜಧಾನಿಯಲ್ಲಿ ಬಸ್ ಆದ್ಯತಾ ಪಥ ವಿಸ್ತರಣೆ ಮಾಡಲು ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುವುದು ಗ್ರೀನ್‌ಪೀಸ್‌ ಇಂಡಿಯಾ ಸಮೀಕ್ಷೆಯಲ್ಲಿ (Greenpeace India) ತಿಳಿದುಬಂದಿದೆ.

ಗ್ರೀನ್‌ಪೀಸ್ ಇಂಡಿಯಾ ‘ಸರ್ಕಾರಿ ಬಸ್‌ಗಳ ಮೇಲೆ ಸಾರ್ವಜನಿಕರ ಅವಲಂಬನೆ: ಸಾರ್ವಜನಿಕರ ಬಸ್‌ ಬಳಸುವ ವರ್ತನೆಯ ಮೇಲೆ ಪ್ರತ್ಯೇಕ ಬಸ್‌ ಲೇನ್‌ಗಳ ಪರಿಣಾಮʼ ಎಂಬ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಬೆಂಗಳೂರಿನಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಪ್ರತ್ಯೇಕ ಬಸ್ ಆದ್ಯತಾ ಪಥ (Bus Priority Lane) ಸಾರ್ವಜನಿಕ ಸಾರಿಗೆ ಬಳಕೆದಾರರ ಮೇಲೆ ಬೀರಿದ ಪರಿಣಾಮಗಳನ್ನು ಬಹಿರಂಗಪಡಿಸಿದೆ.

ಪ್ರಸ್ತುತ ವರದಿಯನ್ನು 2022ರ ಮೇ ಮತ್ತು ಜುಲೈ ಅವಧಿಯಲ್ಲಿ ಸುಮಾರು 979 ಬಿಎಂಟಿಸಿ ಬಸ್ ಪ್ರಯಾಣಿಕರೊಂದಿಗೆ ನಡೆಸಲಾದ ಸಮೀಕ್ಷೆಯನ್ನು ಆಧರಿಸಿ ತಯಾರಿಸಲಾಗಿದೆ. 2022ರ ಮಧ್ಯಭಾಗದಲ್ಲಿ ಔಟರ್ ರಿಂಗ್‌ ರೋಡ್‌ (ORR) ಉದ್ದಕ್ಕೂ ಸುಮಾರು 18.5 ಕಿ.ಮೀ. ದೂರದವರೆಗೆ ಬಸ್‌ಗೆಂದೇ ಪ್ರತ್ಯೇಕವಾಗಿ ಮೀಸಲಾಗಿಟ್ಟಿದ್ದ ಪ್ರತ್ಯೇಕ ಬಸ್ ಲೇನ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಈ ಅಧ್ಯಯನವು ಪ್ರತ್ಯೇಕ ಬಸ್ ಆದ್ಯತಾ ಲೇನ್‌ಗಳು ಸಂಚಾರದಟ್ಟಣೆಯ ನಡುವೆ ಬಸ್‌ಗಳು ನಗರದಲ್ಲಿ ಗೊತ್ತುಪಡಿಸಿದ ಸ್ಥಳವನ್ನು ಕ್ರಮಿಸಲು ತಗಲುವ ಅವಧಿಯ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳು ಮತ್ತು ಬೆಂಗಳೂರಿನ ವಾಯುಮಾಲಿನ್ಯ ಬಿಕ್ಕಟ್ಟಿಗೆ ಅಗತ್ಯವಿರುವ ಪರಿಹಾರಗಳ ಮೇಲೆ ಬೆಳಕು ಚೆಲ್ಲುತ್ತದೆ.

ಇದನ್ನೂ ಓದಿ | Logistics Park: ಬೆಂಗಳೂರಲ್ಲಿ 1770 ಕೋಟಿ ವೆಚ್ಚದ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್! NHLML ಜತೆ ಡೀಲ್

ಪ್ರಸ್ತುತ ಸಮೀಕ್ಷೆಯು ಬಸ್ ಪ್ರಯಾಣಿಕರಲ್ಲಿ ಶೇ. 28 ಕ್ಕಿಂತ ಹೆಚ್ಚು ಪ್ರಯಾಣಿಕರು, ಬಸ್ ಲೇನ್‌ಗಳ ಅನುಷ್ಠಾನದ ನಂತರ ಬಸ್‌ನ ಪ್ರಯಾಣಕ್ಕೆ ತಗಲುವ ಅವಧಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬದಲಾವಣೆಯು ವಿಶೇಷವಾಗಿ ಹೆಚ್ಚು ದೂರ ಪ್ರಯಾಣಿಸುವವರಿಗೆ ಅನುಕೂಲಕರವಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಶೇ. 54 ಜನರು ತಮ್ಮ ಪ್ರಯಾಣಕ್ಕೆ ಈ ಹಿಂದೆ ತಗುಲುತ್ತಿದ್ದ ಸಮಯ ಸುಮಾರು 60 ರಿಂದ 90 ನಿಮಿಷಗಳಾಗಿತ್ತು. ಆದರೆ, ಈಗ ಅದು 30-60 ನಿಮಿಷಕ್ಕೆ ಇಳಿದಿದೆ ಎನ್ನುತ್ತಾರೆ. ಇದರೊಂದಿಗೆ, ಶೇ.82 ಪ್ರತಿಕ್ರಿಯಾದಾರರು ಒಟ್ಟಾರೆಯಾಗಿ ಬಸ್ ಲೇನ್‌ಗಳಿಂದಾಗಿ ಅನುಕೂಲಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗ್ರೀನ್‌ಪೀಸ್ ಇಂಡಿಯಾ ಕ್ಯಾಂಪೇನರ್‌ ಅಮೃತಾ ಎಸ್.ಎನ್ ಮಾತನಾಡಿ, ಬಸ್ ಆದ್ಯತಾ ಲೇನ್‌ನ ಪರಿಚಯವು ಹೊಸ ಬಳಕೆದಾರರನ್ನು, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.3 ಜನರು ಬಸ್‌ಲೇನ್‌ ನಿಗದಿತ ಪ್ರದೇಶಕ್ಕೆ ಸೀಮಿತವಾಗಿದ್ದರೂ, ಬಸ್ ಲೇನ್ ಅನ್ನು ಪರಿಚಯಿಸಿದಾಗಿನಿಂದ ಸಾರ್ವಜನಿಕ ಬಸ್‌ಗಳಲ್ಲಿ ಸಂಚರಿಸಲು ಆರಂಭಿಸಿದ್ದಾರೆ. ಈ ‘ಹೊಸ’ ಬಳಕೆದಾರರಲ್ಲಿ ಹೆಚ್ಚಿನ ಪಾಲು ಮಹಿಳೆಯರದ್ದೇ ಆಗಿದೆ (ಶೇ.73), ಇದು ಬಸ್ ಲೇನ್‌ಗಳ ಅನುಷ್ಠಾನ ಮಹಿಳೆಯರ ಮೇಲೆ ಉಂಟುಮಾಡಿದ ಧನಾತ್ಮಕ ಪರಿಣಾಮದೆಡೆಗೆ ಗಮನ ಸೆಳೆಯುತ್ತದೆ. ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ (DULT) ಗೊತ್ತುಪಡಿಸಿದ ಮಾರ್ಗಗಳಲ್ಲಿ ಪ್ರತ್ಯೇಕ ಬಸ್ ಆದ್ಯತೆಯ ಲೇನ್‌ಗಳನ್ನು ಅಳವಡಿಸಲು ನಾವು ಈಗಾಗಲೇ ನೀಡಿದ್ದ ಶಿಫಾರಸುಗಳನ್ನು ಈ ಸಂಶೋಧನೆಗಳು ಬಲವಾಗಿ ಬೆಂಬಲಿಸುತ್ತವೆ ಎಂದು ತಿಳಿಸಿದ್ದಾರೆ.

ನಗರದಾದ್ಯಂತ ಪ್ರತ್ಯೇಕ ಬಸ್ ಪಥ ನಿರ್ಮಾಣಕ್ಕೆ ಆಗ್ರಹ

ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರು ನಗರದಾದ್ಯಂತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಲೇನ್‌ಗಳನ್ನು ಪರಿಚಯಿಸುವಂತೆ ಆಗ್ರಹಿಸಿದ್ದಾರೆ. ಇದು ಪ್ರತ್ಯೇಕ ಬಸ್ಸು ಆದ್ಯತಾ ಲೇನ್‌ ಅಳವಡಿಸಲು ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಅಪಾರ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ಹೆಬ್ಬಾಳ, ಟಿನ್ ಫ್ಯಾಕ್ಟರಿ, ಸಿಲ್ಕ್ ಬೋರ್ಡ್, ಮಾರತಹಳ್ಳಿ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ, ಮೆಜೆಸ್ಟಿಕ್ ಮತ್ತು ಕೆಆರ್ ಪುರಂನಂತಹ ಪ್ರಮುಖ ಪ್ರದೇಶಗಳಲ್ಲಿ ಬಸ್‌ ಆದ್ಯತಾ ಪಥಗಳನ್ನು ಅಳವಡಿಸುವಂತೆ ಶೇ.86 ಜನರು ಸೂಚಿಸಿದ್ದಾರೆ. ಕೆಲವು ಪ್ರತಿಕ್ರಿಯಾದಾರರು ಇಡೀ ನಗರದಾದ್ಯಂತ ಪ್ರತ್ಯೇಕ ಬಸ್ ಲೇನ್‌ಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರೀನ್‌ಪೀಸ್ ಇಂಡಿಯಾದ ಕ್ಯಾಂಪೇನ್‌ ಮ್ಯಾನೇಜರ್‌ ಅವಿನಾಶ್ ಚಂಚಲ್ ಪ್ರತಿಕ್ರಿಯಿಸಿ, ಬೆಂಗಳೂರಿನ ಸಾರಿಗೆ ಸಮಸ್ಯೆಗಳು ಮತ್ತು ಇಲ್ಲಿನ ವಾಯು ಮಾಲಿನ್ಯದ ಬಿಕ್ಕಟ್ಟು ಒಂದಕ್ಕೊಂದು ಪರಸ್ಪರ ತಳುಕುಹಾಕಿಕೊಂಡಿರುವ ಬಗ್ಗೆ ಗಮನ ಸೆಳೆದಿದ್ದಾರೆ. ವಾಹನಗಳು ನೈಟ್ರೋಜನ್ ಆಕ್ಸೈಡ್ ಮತ್ತು ಕಣಗಳಂತಹ ಹಾನಿಕಾರಕ ಮಾಲಿನ್ಯಕಾರಕಗಳನ್ನು ಹೊರಸೂಸುವುದರಿಂದ ಹೆಚ್ಚಿನ ಪ್ರಮಾಣದ ಸಂಚಾರ ದಟ್ಟಣೆಯು ವಾಯುಮಾಲಿನ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗುತ್ತಿದೆ. ಬೆಂಗಳೂರಿನ ಗಾಳಿಯ ಗುಣಮಟ್ಟವು ಭಾರತದಲ್ಲಿಯೇ ಅತ್ಯಂತ ಕಳಪೆ ಮಟ್ಟಕ್ಕಿಳಿದಿದೆ, ಇದು ಇಲ್ಲಿನ ನಿವಾಸಿಗಳಿಗೆ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ, ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಉಸಿರಾಟ ಅಥವಾ ಹೃದಯರಕ್ತನಾಳದ ತೊಂದರೆ ಹೊಂದಿರುವ ವ್ಯಕ್ತಿಗಳಂತಹ ದುರ್ಬಲ ವ್ಯಕ್ತಿಗಳಲ್ಲಿ ಇದು ಗಂಭೀರ ಆರೋಗ್ಯಪರಿಣಾಮಗಳನ್ನು ಉಂಟುಮಾಡಬಲ್ಲದು ಎಂದು ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ಎದುರಿಸಲು, ನಾವು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಬೇಕು ಮತ್ತು ಬಸ್ ಲೇನ್‌ಗಳು, ಬೈಸಿಕಲ್ ಲೇನ್‌ಗಳು ಮತ್ತು ಪಾದಚಾರಿ ಮಾರ್ಗಗಳಂತಹ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಬೇಕು. ಇದು ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯದ ಮಟ್ಟವನ್ನು ಇಳಿಮುಖಗೊಳಿಸುತ್ತದೆ ಎಂದು ಚಂಚಲ್ ಹೇಳಿದ್ದಾರೆ.

ಈ ಸಮೀಕ್ಷೆ ಮತ್ತು ಇತರ ಹಲವಾರು ಅಧ್ಯಯನಗಳು ಪ್ರತ್ಯೇಕ ಬಸ್ ಲೇನ್‌ಗಳ ಅನುಷ್ಠಾನಕ್ಕಾಗಿ ಬಲವಾಗಿ ಮತ್ತು ಸತತವಾಗಿ ಪ್ರತಿಪಾದನೆ ನಡೆಸುತ್ತಿವೆ. ಬಸ್ ಲೇನ್‌ಗಳ ಅನುಷ್ಠಾನಕ್ಕೆ ತಗಲುವ ವೆಚ್ಚವು ಕಡಿಮೆ ಮತ್ತು ಇದು ಪ್ರಯಾಣಿಕರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈ ಪ್ರಯೋಜನಗಳಲ್ಲಿ ವೇಗವಾಗಿ ಕ್ರಮಿಸಬಲ್ಲ ಮತ್ತು ಅಗ್ಗದ ಸಾರಿಗೆಯ ಲಭ್ಯತೆ, ಪ್ರಯಾಣಕ್ಕೆ ತಗಲುವ ಅವಧಿಯಲ್ಲಿ ಇಳಿಕೆ, ಸಾರ್ವಜನಿಕ ಸಾರಿಗೆಯ ಹೆಚ್ಚಿದ ಬಳಕೆ, ಸುರಕ್ಷಿತತೆ ಮತ್ತು ಇಂಗಾಲದ ಹೊರಸೂಸುವಿಕೆಯಲ್ಲಿನ ಇಳಿಕೆ ಸೇರಿವೆ.

ಇದನ್ನೂ ಓದಿ | Namma Metro : ಸೆಪ್ಟೆಂಬರ್ 29ರಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗ ಆರಂಭ?

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಣೆಯಲ್ಲಿ ಮಹತ್ತರ ಪಾತ್ರ

2019ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾದ ಔಟರ್ ರಿಂಗ್ ರೋಡ್ ಬಸ್ ಲೇನ್ ಅನ್ನು ದುರದೃಷ್ಟವಶಾತ್ ಬೆಂಗಳೂರು ಮೆಟ್ರೋದ ಬ್ಲೂ ಲೈನ್ ನಿರ್ಮಾಣದ ಕಾರಣ ತೆಗೆದುಹಾಕಲಾಯಿತು. ಆದಾಗ್ಯೂ, ಬೆಂಗಳೂರಿನ ವಾಯುಮಾಲಿನ್ಯ ಮತ್ತು ಸಂಚಾರ ದಟ್ಟಣೆಯ ಬಿಕ್ಕಟ್ಟುಗಳಿಗೆ ಪರಿಹಾರವಾಗಿ ಬಸ್ ಲೇನ್‌ಗಳ ಅಳವಡಿಕೆಯನ್ನು ಮರುಪರಿಶೀಲಿಸುವ ಅಗತ್ಯವನ್ನು ವರದಿಯು ಸ್ಪಷ್ಟವಾಗಿ ಸೂಚಿಸುತ್ತದೆ. ಬೆಂಗಳೂರಿನಲ್ಲಿ 11 ಇತರ ಪ್ರಸ್ತಾವಿತ ಪ್ರದೇಶಗಳಲ್ಲಿ ಬಸ್ ಲೇನ್‌ಗಳಿಗೆ ಆದ್ಯತೆ ಮತ್ತು ಅಳವಡಿಕೆಯು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಾಕಷ್ಟು ಮಹತ್ತರ ಪಾತ್ರವನ್ನು ವಹಿಸಬಲ್ಲುದು. ಬಸ್‌ಗಳಿಗೆ ಪ್ರತ್ಯೇಕವಾಗಿ ಲೇನ್‌ಗಳನ್ನು ಮೀಸಲಿಡುವ ಮೂಲಕ, ನಾವು ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಬಹುದು, ಅಂತಿಮವಾಗಿ ಇದು ನಾಗರಿಕರಿಗೆ ಸುಸ್ಥಿರ ಮತ್ತು ಅನುಕೂಲಕರ ಸಂಚಾರವನ್ನು ಒದಗಿಸಲು ಕಾರಣವಾಗುತ್ತದೆ ಎಂದು ಗ್ರೀನ್‌ ಪೀಸ್‌ ಇಂಡಿಯಾ ತಿಳಿಸಿದೆ.

Exit mobile version