ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಸಮಾಜದ ಶಾಂತಿ ಕೆಡಿಸಿ, ದೇಶ, ವಿದೇಶಗಳಲ್ಲಿ ಕರ್ನಾಟಕದ ಗೌರವ ಹರಾಜು ಹಾಕುತ್ತಿರುವ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು, ಈ ಬಿಜೆಪಿ ಸರ್ಕಾರ ತೊಲಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷ ಗುರುವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಜತೆ ಮಾತನಾಡಿದರು.
ಇದನ್ನೂ ಓದಿ | ತುಮಕೂರು ಜೈಲಿನಲ್ಲಿ NSUI ಕಾರ್ಯಕರ್ತನ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸೇರಿ ಬಿಜೆಪಿ ಸರ್ಕಾರದ ಮನಸ್ಥಿತಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ಮಾತಿನಂತೆ, ಬಿಜೆಪಿ ಸರ್ಕಾರ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿ, ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್ವರೆಗೂ, ನಾರಾಯಣ ಗುರುಗಳಿಂದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮಿ, ಮುರುಘಾ ಮಠದ ಸ್ವಾಮಿಗಳು, ಭಗತ್ ಸಿಂಗ್ ವರೆಗೂ ಯಾರೊಬ್ಬರನ್ನೂ ಬಿಡದೆ ಈ ಸರ್ಕಾರ ಅಪಮಾನ ಮಾಡಿದೆ.
ನಾವೆಲ್ಲರೂ ಸಂವಿಧಾನದ ಆಶ್ರಯದಲ್ಲಿ ಬದುಕುತ್ತಿದ್ದು, ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಅಲ್ಲವೇ? ಅಂಬೇಡ್ಕರ್ ಅವರನ್ನು ಮನೆ ದೇವರು ಎಂದು ಪರಿಗಣಿಸಿದ್ದು, ದೇಶದಾದ್ಯಂತ ಅವರ ಅತಿ ಹೆಚ್ಚು ಪುತ್ಥಳಿ ಇವೆ. ನಮ್ಮ ಕಚೇರಿಗಳಲ್ಲಿ ಅವರ ಫೋಟೋ ಇಟ್ಟುಕೊಂಡು ಗೌರವಿಸುತ್ತೇವೆ. ಆದರೆ ಬಿಜೆಪಿಯವರು ಅಂಬೇಡ್ಕರ್ ಅವರಿಗೆ ಹೀಗೆ ಅಪಮಾನ ಮಾಡುವುದು ಸರಿಯೇ? ಬಸವಣ್ಣನವರ, ನಾರಾಯಣ ಗುರುಗಳ ಆಚಾರ, ವಿಚಾರ ಪ್ರಚಾರ ಮಾಡುವ ಸಂದರ್ಭದಲ್ಲಿ ಅಪಮಾನ ಮಾಡಲಾಗುತ್ತಿದೆ. ಬುದ್ಧ, ಜೈನರ ತ್ಯಾಗವನ್ನು ನಾವು ಸ್ಮರಿಸುತ್ತೇವೆ. ಈ ಎಲ್ಲರಿಗೂ ಅಪಮಾನ ಮಾಡಿ, ಅವರ ವಿಚಾರಕ್ಕೆ ತಿಲಾಂಜಲಿ ಹಾಕಲು ಪ್ರಯತ್ನಿಸಲಾಗಿದೆ.
ಜ್ಞಾನಪೀಠ ಪ್ರಶಸ್ತಿ ಪಡೆದ, ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದ ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆ. ಅನ್ನ, ಅಕ್ಷರ ಹಾಗೂ ಆಶ್ರಯ ದಾಸೋಹವನ್ನು ಮಾಡಿದ ಶಿವಕುಮಾರ ಸ್ವಾಮೀಜಿ ಅವರ ಹೆಸರು ಅಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.
ನಿಮ್ಮ ನಾಗ್ಪುರ ಶಿಕ್ಷಣ ನೀತಿ, ಕೆಲಸಕ್ಕೆ ಬಾರದವನನ್ನು ಇಟ್ಟುಕೊಂಡು, ಆತನ ಕೈಲಿ ಪಠ್ಯ ಪರಿಷ್ಕರಿಸಿ, ಇಡೀ ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದೀರಿ. ಇದರಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಇದರ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ. ಇದನ್ನು ಸರ್ಕಾರದಿಂದ ನಾವು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಹೋರಾಟ ಜನರ ಪರವಾಗಿ, ಸಾಮಾಜಿಕ ನ್ಯಾಯ, ಗುರು, ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರ ಪರವಾಗಿರಲಿದೆ.
ಇದನ್ನೂ ಓದಿ| ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಜಾಲಾಡಲಿದೆ ಗುಪ್ತಚರ ಇಲಾಖೆ
ಹೋರಾಟ ಎಲ್ಲಿವರೆಗೂ ತಗೆದುಕೊಂಡು ಹೋಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಹೋರಾಟವನ್ನು ಪ್ರತಿ ತಾಲೂಕು ಹಾಗೂ ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗುತ್ತೇವೆ. ಈ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು. ನಿಮ್ಮಲ್ಲಿ ಯಾರಾದರೂ ಹೋರಾಟ ಮಾಡಿದರೆ ನಮ್ಮನ್ನು ಕರೆಯಿರಿ. ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ರಮೇಶ್ ಕುಮಾರ್, ಆರ್ ವಿ ದೇಶಪಾಂಡೆ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಮುಖಂಡರಾದ ಬೋಸರಾಜ್, ಡಿ ಆರ್ ಪಾಟೀಲ್, ಹುಲಗೇರಿ, ಬಸನಗೌಡ ದದ್ದಲ್, ಜೈರಾಮ್ ರಮೇಶ್, ಪ್ರಕಾಶ್ ರಾಥೋಡ್, ಡಾ ಅಜಯಕುಮಾರ್ ಸಿಂಗ್, ಕುಸುಮ ಶಿವಳ್ಳಿ, ಖನೀಜ್ ಫಾತಿಮಾ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ | ಪಠ್ಯಪುಸ್ತಕದ ಮತ್ತೊಂದು ಎಡವಟ್ಟು: ಮಕ್ಕಳಿಗೆ ಪಾಠ ಮಾಡುವ ರೀತಿ ಇದೇನ?