Site icon Vistara News

Vishwa Kundapura Kannada Dina: ಬೆಂಗಳೂರಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಗಮ್ಮತ್ತು ಹೀಗಿತ್ತು!

Vishwa Kundapura Kannada Dina 2024 in banglore celebrate

ಬೆಂಗಳೂರು: ಆಸಾಡಿ ಅಮಾವಾಸ್ಯೆ ಕುಂದಾಪುರ ಸೇರಿದಂತೆ ಕರಾವಳಿ ಭಾಗದವರಿಗೆ ಬಹಳ ವಿಶೇಷ. (ಆಗಸ್ಟ್‌ 4) ವಿಶ್ವ ಕುಂದಾಪ್ರ ಕನ್ನಡ ದಿನದ ಹಿನ್ನೆಲೆಯಲ್ಲಿ ಟೀಮ್‌ ಕುಂದಾಪುರಿಯನ್ಸ್‌ ಬೆಂಗಳೂರಿನ ಬಸವೇಶ್ವರ ನಗರದ ನೇತಾಜಿ ಗ್ರೌಂಡ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಚಿತ್ರನಟ ರಮೇಶ್‌ ಭಟ್‌ ಕಾರ್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಕನ್ನಡ ಬದುಕಿನೊಂದಿಗೆ ಬೆಸೆದ ಭಾಷೆಯಾಗಿದೆ. ಅವರು ತಮ್ಮ ತಾಯಿಗೆ ನೀಡುವಷ್ಟೇ ಗೌರವವನ್ನು ತಮ್ಮ ಭಾಷೆ ನೀಡುತ್ತಾರೆ ಎಂದು ಚಿತ್ರನಟ ರಮೇಶ್ ಭಟ್ ತಿಳಿಸಿದರು.

ಟೀಂ ಕುಂದಾಪುರಿಯನ್ಸ್‌ ಭಾನುವಾರ ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ಹಮ್ಮಿಕೊಂಡ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಾಟಿಸಿ ಮಾತನಾಡಿದರು. ʻʻಕುಂದಾಪುರ ಇದು ಬದುಕಿನ ಭಾಷೆಯೇ ಹೊರತು ಉದ್ಯಮದ ಭಾಷೆಯಲ್ಲ. ಹಾಗಾಗಿ ಇಂದಿಗೂ ಕುಂದಾಪುರ ಭಾಷೆ ಜೀವಂತವಾಗಿದೆ. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಮಾತೃ ಭಾಷೆ ಹಾಗೂ ಮನೆಯ ಮೂಲ ಭಾಷೆ ಮರೆಯಬಾರದು. ನಮ್ಮ ಭಾಷೆಯ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರೂ ವ್ಯವಹರಿಸಬೇಕುʼʼ ಎಂದರು.

ಇದನ್ನೂ ಓದಿ: Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಂದಾಪುರ ಭಾಗದ ಗ್ರಾಮೀಣ ಕ್ರೀಡೆಗಳು ನೆರೆದವರನ್ನು ರಂಜಿಸಿತು. ಇದರೊಂದಿಗೆ ಗಂಜಿ ಊಟ ಕಾರ್ಯಕ್ರಮಕ್ಕೆ ಬಂದವರ ಹೊಟ್ಟೆ ತಣಿಸಿತ್ತು. ಮೀನು ಮಾರುವವನ ವೇಷ, ಯಕ್ಷಗಾನ ವೇಷ ಹೀಗೆ ಕರಾವಳಿ ಸಂಪ್ರದಾಯ ಪ್ರತಿಬಿಂಬಿಸುವ ವಿವಿಧ ವೇಷಗಳನ್ನು ಧರಿಸಿದ್ದ ಪುಟ್ಟ ಮಕ್ಕಳು ಕುಂದಗನ್ನಡದಲ್ಲಿ ಪಟಪಟನೆ ಅರಳು ಹುರಿದಂತೆ ಮಾತನಾಡಿ ಜನರನ್ನು ರಂಜಿಸಿದರು. ಕರಾವಳಿ ಭಾಗದ ಸಾಂಸ್ಕೃತಿಕ ಕಲೆಗಳಲ್ಲಿ ಒಂದಾದ ಕಂಗೀಲು ಕುಣಿತ ಪ್ರದರ್ಶನವೂ ಏರ್ಪಟ್ಟಿತ್ತು. ಕರಾವಳಿ ಕಲಾವಿದರ ಕಂಗೀಲು ನೃತ್ಯ ನೆರೆದಿದ್ದ ಜನರ ಗಮನ ಸೆಳೆಯಿತು. ಕುಂದಾಪುರ, ಕರಾವಳಿ ಭಾಗದ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಕೂಡ ಆಯೋಜಿಸಲಾಗಿದ್ದು, ಹೆಣ್ಣುಮಕ್ಕಳು ಕಪ್ಪೆ ಜಿಗಿತ ಆಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಕುಂದಾಪುರ ರತ್ನ ಪ್ರಶಸ್ತಿ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಸಾಧನೆ ಮಾಡಿದ ಅರೆಹೊಳೆ ಸದಾಶಿವ ರಾವ್, ಚಿತ್ರ ನಿರ್ದೇಶಕ ಯಾಕುಬ್ ಖಾದರ್ ಅವರಿಗೆ ನೀಡಿ ಗೌರವಿಸಲಾಯಿತು. ‘ಕುಂದಾಪುರ ಸಮ್ಮಾಾನ’ ಗೌರವವನ್ನು ಯಕ್ಷಗಾನ ಕಲಾವಿದ ಶ್ರೀನಿವಾಸ , ಗೌರಿ ಕೆ., ಮುಳುಗುತಜ್ಞ ಮಂಜುನಾಥ ಕೊಡ್ಲಾಾಡಿ, ಅಂತಾರಾಷ್ಟ್ರೀಯ ಕ್ರೀಡಾಪಟು ವಿಠ್ಠಲ್, ಸಮಾಜ ಸೇವೆ ದಿನೇಶ್ ಬಾಂದವ್ಯ, ಶಿಕ್ಷಣ ಸುಜಾತ, ಪ್ರಗತಿ ಪರ ಕೃಷಿಕ ಕೃಷ್ಣ ಕುಲಾಲ್ ಆವರ್ಸೆ ಅವರಿಗೆ ನೀಡಿ ಸಮ್ಮಾಾನಿಸಲಾಯಿತು.

ಶಾಸಕ ಗುರುರಾಜ್ ಗಂಟಿಹೊಳೆ, ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್‌ಟ್‌ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ನಟಿ ಅಮೃತಾ ರಾಮಮೂರ್ತಿ, ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದರು

Exit mobile version