ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆ ವತಿಯಿಂದ ನಗರದ ವೈಯಾಲಿಕಾವಲ್ ಬಳಿಯ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ವಿಸ್ತಾರ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್ (Sharath MS) ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಸಾಧಕರಿಗೆ ಮಾಜಿ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ್ ಸೇರಿ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಆದರ್ಶ ರತ್ನ, ದ್ರೋಣ ರತ್ನ, ಕನ್ನಡ ರತ್ನ, ಸಾಧನೆ ರತ್ನ, ದಂತ ರತ್ನ ಸೇರಿ ಹಲವು ಪ್ರಶಸ್ತಿಗಳನ್ನು ನೀಡಲಾಯಿತು.
ರಾಷ್ಟ್ರ ಪ್ರಶಸ್ತಿ, ಮುಖ್ಯಮಂತ್ರಿ ಪದಕ ಪುರಸ್ಕೃತ ದಕ್ಷ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಸೇವಕರನ್ನು, ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪರೀಕ್ಷೆ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಸ್ತಾರ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ.ಎಸ್ ಅವರು ಮಾತ್ರವಲ್ಲದೆ ಪತ್ರಕರ್ತರಾದ ಟಿವಿ 5 ವಾಹಿನಿಯ ಅರ್ಚನ ಶರ್ಮ, ಸುವರ್ಣ ನ್ಯೂಸ್‌ನ ಸುಗುಣ ಶ್ರೀನಿವಾಸ್, ಕರ್ನಾಟಕ ಡಿಜಿಟಲ್ ಟಿವಿಯ ಶಿವು ಬೆಸಗರಹಳ್ಳಿ, ಟಿವಿ 9 ಮಾಲತೇಶ್ ಜಗ್ಗೀನ್, ಪವರ್ ಟಿವಿಯ ಲೋಕೇಶ್ ಗೌಡ, ನ್ಯೂಸ್ 18 ವಾಹಿನಿಯ ಭೈರಹನುಮಯ್ಯ, ಝೀ ಕನ್ನಡ ವಾಹಿನಿಯ ಪ್ರಕಾಶ್ ಎಚ್.ಟಿ. ಅವರು ಸಹ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ | ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಡಾ. ಸುಮಾ ಶಿವಾನಂದ ದೇಸಾಯಿ ಆಯ್ಕೆ
ಜನ್ಮ ಭೂಮಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಅವರು ಮಾತನಾಡಿ, ನಮ್ಮ ಸಂಘದಿಂದ ರಾಜ್ಯದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಸಾಧಕರಿಗೆ ಕಳೆದ ಹಲವು ವರ್ಷಗಳಿಂದ ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಿಕೊಂಡು ಬಂದಿದ್ದು, ವಿವಿಧ ರಂಗದಲ್ಲಿ ಸಾಮಾಜಿಕ ಏಳಿಗೆಗಾಗಿ ದುಡಿದ ಸಾಧಕರನ್ನು ಈ ಬಾರಿಯೂ ಗುರುತಿಸಲಾಗಿದೆ ಎಂದು ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ