ಬೆಂಗಳೂರು: ಬೇಸಿಗೆ ಆರಂಭದಲ್ಲೇ ರಾಜಧಾನಿ ಬೆಂಗಳೂರಲ್ಲಿ ನೀರಿನ ಸಮಸ್ಯೆ (Water Crisis) ಶುರುವಾಗಿದೆ. ಬಿರು ಬೇಸಿಗೆಯಲ್ಲಿ ನೀರಿನ ಬವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಹೆಲ್ಪ್‌ಲೈನ್ ಶುರು ಮಾಡಿದೆ. ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ಹೊರವಲಯದ 35 ವಾರ್ಡ್‌ಗಳ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಉಸ್ತುವಾರಿಗಾಗಿ ನೋಡಲ್ ಅಧಿಕಾರಿಗಳ ನಿಯೋಜನೆಯನ್ನೂ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯ ಸಹಾಯವಾಣಿ 1533ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯ ಇನ್ನುಳಿದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಸಹಾಯವಾಣಿ ಸಂಖ್ಯೆಯಾದ 1916 ಗೆ ಕರೆ ಮಾಡಬಹುದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರ ವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಿವೆ. ಇಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಛೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಶೀಘ್ರ ಕುಡಿಯುವ ನೀರಿನ ಸಮಸ್ಯೆ ಆಲಿಸುವ ಸಲುವಾಗಿ ಪ್ರತ್ಯೇಕವಾಗಿ ಮೇಲುಸ್ತುವಾರಿಗಾಗಿ ದಾಸರಹಳ್ಳಿಯ ಕಾರ್ಯಪಾಲಕ ಅಭಿಯಂತರರು (Executive Engineer) ಧರಣೇಂದ್ರ ಕುಮಾರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
ಹೊರ ವಲಯಗಳಲ್ಲಿ ಬರುವ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆಯು 35 ವಾರ್ಡ್‌ಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ