Site icon Vistara News

Water Crisis: ಇನ್ನು 3 ದಿನದಲ್ಲಿ ನಿಮ್ಮ ಮನೆಯ ನಲ್ಲಿಗಳಿಗೆ ಈ ಸಾಧನ ಹಾಕದಿದ್ದರೆ 5000 ರೂ. ದಂಡ!

Water Crisis in Bengaluru

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ನೀರಿಲ್ಲದೇ (Water Crisis) ಜನರು ಪರದಾಡುವಂತಾಗಿದೆ. ಭೂಮಿ ಬತ್ತಿ ಹೋಗಿದ್ದು, ಬೋರ್‌ವೆಲ್‌ಗಳೆಲ್ಲವೂ ಬಂದ್‌ ಆಗಿದೆ. ಹನಿ ನೀರಿಗೂ ಜನರು ಸಂಕಷ್ಟವನ್ನು ಎದುರಿಸಬೇಕಾಗಿದೆ. ದಿನನಿತ್ಯದ ಬಳಕೆಯಿಂದ ಹಿಡಿದು ಕುಡಿಯುವ ನೀರಿಗೂ ಬಡಿದಾಡಿಕೊಳ್ಳುವಂತಾಗಿದೆ. ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಸಾಕಷ್ಟು ಕೊಳವೆ ಬಾವಿಗಳು (ಬೋರ್‌ವೆಲ್‌ಗಳು) ಬತ್ತಿ ಹೋಗಿವೆ. ಈ ಹಿನ್ನೆಲೆಯಲ್ಲಿ ನಲ್ಲಿಗಳಲ್ಲಿ ಕಡ್ಡಾಯವಾಗಿ Flow Restrictor/Aerator ಎಂಬ ಸಾಧನವನ್ನು ಅಳಡಿಸಿಕೊಳ್ಳಬೇಕೆಂದು ಜಲಮಂಡಳಿ (BWSSB) ಆದೇಶಿಸಿದೆ.

ನಗರದ ಮಾಲ್‌ಗಳಿಂದ ಹಿಡಿದು ವಾಣಿಜ್ಯ ಸಂಕೀರ್ಣಗಳು, ಅಪಾರ್ಟ್‌ಮೆಂಟ್‌ಗಳು, ಸರ್ಕಾರಿ ಕಟ್ಟಡಗಳು, ಐಷಾರಾಮಿ ಹೋಟೆಲ್‌ಗಳು ಸೇರಿ ರೆಸ್ಟೋರೆಂಟ್‌ಗಳು ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ Flow Restrictor/Aerator ಎಂಬ ಸಾಧನವನ್ನು ಅಳವಡಿಸಿರಬೇಕು. ಇದೇ ತಿಂಗಳ ಮಾ.31ರೊಳಗಾಗಿ ಅಳವಡಿಸಿಕೊಂಡು ನಂತರ ನೀರನ್ನು ಬಳಕೆ ಮಾಡಿಕೊಳ್ಳಿ ಎಂದು ಜಲಮಂಡಳಿ ಕಳೆದ 21ರಂದು ಆದೇಶಿಸಿತ್ತು. ಇನ್ನೂ ಈ ಕ್ರಮವನ್ನು ಸರಿಯಾಗಿ ನಿರ್ವಹಿಸುವವರಿಗೆ ಬೆಂಗಳೂರು ಜಲಮಂಡಳಿ ವತಿಯಿಂದ “ಪರಿಸರ ಸ್ನೇಹಿ ಹಸಿರು ಸ್ಟಾರ್ ಬಳಕೆದಾರ” ಎಂಬ ಪ್ರಮಾಣ ಪತ್ರ ನೀಡಲಾಗುತ್ತಿದೆ.

ಇದನ್ನೂ ಓದಿ: Murder Case : ಕುಡಿಯುವ ನೀರಿಗಾಗಿ ಚಿಮ್ಮಿತು ರಕ್ತ; ಚಾಕು ಇರಿದು ಯುವಕನ ಕೊಲೆ

ಪ್ರತಿದಿನವೂ ಬೀಳುತ್ತೆ ದಂಡ

ಒಂದು ವೇಳೆ ಮಾ. 31ರ ಒಳಗೆ ಈ ಸಾಧನವನ್ನು ಅಳವಡಿಕೆ ಮಾಡಿಕೊಳ್ಳದೇ ಹೋದರೆ ಭಾರಿ ದಂಡವನ್ನು ತೆತ್ತಾಬೇಕಾಗುತ್ತದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 53 ರಂತೆ ಕ್ರಮವಹಿಸಲಾಗುತ್ತದೆ. ಆ ಪ್ರಕಾರ ನೀರಿನ ಪ್ರಮಾಣದಲ್ಲಿ ಶೇಕಡ 50%ರ ವರೆಗೆ ಕಡಿತ ಮಾಡಿ, ರೂ. 5000/- ಗಳ ದಂಡ ಹಾಕಲಾಗುತ್ತದೆ. ಒಂದು ವೇಳೆ ಉಲ್ಲಂಘನೆಯು ಮರುಕಳಿಸಿದರೆ ದಂಡದ ಮೊತ್ತ 5000 ರೂ. ಜತೆಗೆ, ಹೆಚ್ಚುವರಿಯಾಗಿ 500 ರೂ. ಅನ್ನು ಪ್ರತಿದಿನದಂತೆ ದಂಡವಾಗಿ ವಸೂಲಿ ಮಾಡಲಾಗುತ್ತದೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ. ಮಾತ್ರವಲ್ಲ ಜಲಮಂಡಳಿ ವತಿಯಿಂದಲೆ Flow Restrictor/Aerator ಅಳವಡಿಸಿ ಆ ಮೊತ್ತವನ್ನು ಆಯಾ ಗ್ರಾಹಕರಿಂದಲೇ ವಸೂಲಿಯನ್ನೂ ಮಾಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version