ಬೆಂಗಳೂರು: ಅಗ್ನಿ ದುರಂತಕ್ಕೂ (Fire Accident) ನೀರಿನ ಬಿಸಿ (Water Crisis) ತಟ್ಟಿದೆ. ಕೊತ್ತನೂರು ಬಳಿ ಸೋಮವಾರ ಬೆಳಗಿನ ಜಾವ (ಮಾ.18) ಸಣ್ಣ ಬೆಂಕಿ ಕಿಡಿಯೊಂದು ಇಡೀ ಗೋದಾಮಿಗೆ ಆವರಿಸಿದ್ದರಿಂದ ಕೋಟ್ಯಾಂತರ ರೂ. ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಸಂತೋಷ್ ಎಂಬುವವರ ಒಡೆತನದಲ್ಲಿರುವ ಗಾಯತ್ರಿ ಅಸೋಸಿಯೇಟ್ಸ್ ಗೋಡೌನ್ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಪರದಾಡಬೇಕಾಯಿತು. ಬೆಳಗಿನ ಜಾವ 3-30ಕ್ಕೆ ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಮೊದಮೊದಲು ಸಣ್ಣ ಮಟ್ಟದ ಬೆಂಕಿ ಇರಬಹುದೆಂದು ಭಾವಿಸಲಾಗಿತ್ತು. ನೋಡನೋಡುತ್ತಿದ್ದ ಸುಮಾರು ಒಂಬತ್ತು ವಾಹನಗಳು ಸ್ಥಳಕ್ಕೆ ದೌಡಾಯಿಸಿದವು. ಸತತ 10 ಗಂಟೆಗಳ ಕಾರ್ಯಾಚರಣೆಯಲ್ಲಿ ನೀರಿನ ಸಮಸ್ಯೆ ಉಂಟಾಯಿತು.
ನೀರಿಲ್ಲದೇ ಬೆಂಕಿ ನಂದಿಸುವ ಕಾರ್ಯಾಚರಣೆಯು ಕೆಲಕಾಲ ಸ್ಥಗಿತವಾಗಿತ್ತು. ಇತ್ತ ಬೆಂಕಿ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇತ್ತು. ಇದರಿಂದಾಗಿ ಭಾರತಿ ಸಿಟಿ, ಮಾನ್ಯತಾ ಟೆಕ್ ಪಾರ್ಕ್, ಪೂರ್ವಾಂಕರ ಅಪಾರ್ಟ್‌ಮೆಂಟ್‌ಗಳಿಂದ ನೀರಿಗಾಗಿ ಬೇಡುವ ಪರಿಸ್ಥಿತಿ ಎದುರಾಯಿತು. ಅಲ್ಲಿದ್ದ ಸ್ವಿಮ್ಮಿಂಗ್ ಪೂಲ್‌ನ ನೀರನ್ನೂ ಬಳಿಸಿಕೊಂಡು ಬೆಂಕಿ ಆರಿಸಲಾಯಿತು. ಒಟ್ಟು 80 ಜನ ಅಧಿಕಾರಿಗಳು ಸತತ 10 ಗಂಟೆಗಳ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿ ತಹಬದಿಗೆ ಬಂದಿತ್ತು. ಸಕ್ಕರೆ ದಾಸ್ತಾನಿಗೆ ಬೆಂಕಿ ತಗುಲಿದ್ದರಿಂದ ಬೆಂಕಿ ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು.
ಇದನ್ನೂ ಓದಿ: Bangalore Water Crisis: ಬೆಂಗಳೂರಿನ ನೀರಿನ ಸಮಸ್ಯೆ ಗೆದ್ದವರ ಸ್ಫೂರ್ತಿದಾಯಕ ಕತೆಯಿದು!
ಮಾಲೀಕನ ಕಣ್ಣೀರು
ಈ ಸಂಸ್ಥೆಯು ಕಳೆದ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ದೊಡ್ಡ ದೊಡ್ಡ ಸೂಪರ್ ಮಾರ್ಕೇಟ್‌ಗಳಿಗೆ ಬೇಕಾದ ದಿನಸಿ ಸಾಮಾನು, ತರಕಾರಿ, ಇತರೆ ಪ್ರಾಡಕ್ಟ್‌ಗಳನ್ನು ಈ ಗೋಡೌನ್‌ನಲ್ಲಿ ಸಂಗ್ರಹಿಸಿ ನಂತರ ಎಲ್ಲ ಕಡೆಗಳಲ್ಲಿ ಸಪ್ಲೈ ಮಾಡಲಾಗುತ್ತಿತ್ತು.. ಹೀಗಾಗಿ ಕೊತ್ತನೂರು ಬಳಿಯ ಈ ಗೋಡೌನ್‌ನಲ್ಲಿ ಕೋಟ್ಯಾಂತರ ಮೌಲ್ಯದ ವಸ್ತುಗಳನ್ನು ಇಡಲಾಗಿತ್ತು. ಆದರೆ ಅಗ್ನಿ ಅವಘಡಕ್ಕೆ ಗೋಡೌನ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮಾಲೀಕ ಸಂತೋಷ್ ಕಣ್ಣೀರು ಹಾಕಿದ್ದಾರೆ.
ಈ ಗೋಡೌನ್‌ನಲ್ಲಿ ಕ್ಲೀನಿಂಗ್, ಲೋಡಿಂಗ್ ಅನ್ ಲೋಡಿಂಗ್ , ಡ್ರೈವರ್ಸ್‌ಗಳೆಲ್ಲ ಸೇರಿ ಒಟ್ಟು 200 ಮಂದಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಭಾನುವಾರವಾದ ಕಾರಣ ಅದೃಷ್ಟವಶಾತ್ ಯಾರೂ ಕೂಡ ಗೋಡೌನ್‌ನಲ್ಲಿ ಉಳಿದುಕೊಂಡಿರಲಿಲ್ಲ. ಹೀಗಾಗಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ಅವಘಡವು ಶಾರ್ಟ್ ಸರ್ಕ್ಯೂಟ್‌ನಿಂದ ಆಗಿರುವ ಸಾಧ್ಯತೆ ಇದೆ. ಆದರೆ ಅದು ತನಿಖೆಯಿಂದಷ್ಟೆ ತಿಳಿಯಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ