Site icon Vistara News

Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!

water Price hike in bwssb

ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರು ಮಂದಿಗೆ ಬ್ಯಾಕ್‌ ಟು ಬ್ಯಾಕ್‌ ಶಾಕ್‌ ನೀಡುತ್ತಿದೆ. ಪೆಟ್ರೋಲ್‌, ಡಿಸೇಲ್‌ ದರ ಏರಿಕೆಯಿಂದ ಕಂಗಲಾಗಿದ್ದವರಿಗೆ ಇದೀಗ ಕುಡಿಯುವ ನೀರು ಬಿಸಿತುಪ್ಪವಾಗಲಿದೆ. ಯಾಕೆಂದರೆ ನೀರಿನ ದರ ಹೆಚ್ಚಳಕ್ಕೆ (Water Price Hike) ಜಲಮಂಡಳಿ (BWSSB) ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಗುವುದೊಂದೆ ಬಾಕಿ ಇದೆ.

ಹಿಂದೊಮ್ಮೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ನೀರಿನ ದರ ಏರಿಕೆ ಆಗಬಹುದು ಎಂದು ಸುಳಿವು ನೀಡಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದರ ಏರಿಕೆಗೆ ಬ್ರೇಕ್‌ ಹಾಕಿದ್ದರು. ಇದೀಗ ತೈಲ ಬೆಲೆ ಏರಿಕೆ ಬೆನ್ನಲ್ಲೆ ಜಲಮಂಡಳಿ ನೀರಿನ ದರ ಏರಿಕೆಗೆ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಇದರಿಂದಾಗಿ ಜನರಿಗೆ ಮತ್ತಷ್ಟು ಹೊರೆಯಾಗಲಿದೆ.

ಇದೀಗ ತೆರೆ ಮರೆಯಲ್ಲಿ ದರ ಪರಿಷ್ಕರಣಗೆ ಸಿದ್ಧತೆ ನಡೆದಿದ್ದು, ಗೃಹ ಬಳಕೆ, ವಾಣಿಜ್ಯ ಸೇರಿ ಎಲ್ಲ ರೀತಿಯ ನೀರು ಪೂರೈಕೆ ಮೇಲೆ ಶೇ. 40 ರಷ್ಟು ದರ ಏರಿಕೆಗೆ ಚರ್ಚೆ ನಡೆಯುತ್ತಿದೆ. ಇತ್ತ ನೀರಿನ ದರ ಏರಿಕೆ ಕುರಿತು ಜನ ಸಾಮಾನ್ಯರು ಗರಂ ಆಗಿದ್ದಾರೆ.

10 ವರ್ಷಗಳ ಬಳಿಕ ದರ ಏರಿಕೆ ಪ್ಲ್ಯಾನ್‌

ಬಿಡಬ್ಲ್ಯುಎಸ್​ಎಸ್​ಬಿ ಪರಿಸ್ಥಿತಿ ಚಿಂತಾಜನಕವಾಗಿದ್ದು, 2014ರಿಂದ ಇಲ್ಲಿಯವರೆಗೂ ನೀರಿನ ದರ ಪರಿಷ್ಕರಣೆಯಾಗಿಲ್ಲ. ಸಂಸ್ಥೆಯಲ್ಲಿ ವೇತನ ಹಾಗೂ ವಿದ್ಯುತ್ ಬಿಲ್ ಪಾವತಿಗೆ ಹಣವಿಲ್ಲದಂತಾಗಿದೆ. ಇದರಿಂದ ಇಲ್ಲಿನ ಸಿಬ್ಬಂದಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಪರಿಹಾರ ಕಂಡುಕೊಡಬೇಕಾದರೆ ದರ ಹೆಚ್ಚಳ ಮಾಡುವುದು ಅನಿರ್ವಾಯವಾಗಿದೆ.

ಜಲಮಂಡಳಿಯ ಆದಾಯ ತೀರಾ ಕಡಿಮೆ ಇದೆ. ಈ ಸಂಸ್ಥೆಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ. ಆದರೂ ಬರುವ 104 ಕೋಟಿ ರೂಪಾಯಿಯಲ್ಲಿ 90 ರಿಂದ 95 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಲು ಖರ್ಚಾಗುತ್ತಿದೆ ಎಂದು ಹಿಂದೊಮ್ಮೆ ಡಿ.ಕೆ ಶಿವಕುಮಾರ್‌ ತಿಳಿಸಿದ್ದರು. ಇಲ್ಲಿ ಸಂಪನ್ಮೂಲ ಕ್ರೋಡೀಕರಣ ಆಗಬೇಕಿದೆ. ಇಲ್ಲದಿದ್ದರೆ ಸಂಸ್ಥೆ ಉಳಿಯಲು ಸಾಧ್ಯವಿಲ್ಲ ಎಂದಿದ್ದರು. ಮೂಲಗಳ ಪ್ರಕಾರ ನೀರಿನ ದರ ಏರಿಕೆಯಾಗುವುದು ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ: Petrol Diesel Price: ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ಇಂದು ಬಿಜೆಪಿ ಮಿಂಚಿನ ಪ್ರತಿಭಟನೆ

ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ತೈಲ ದರ ಏರಿಸಿದ ಕಾಂಗ್ರೆಸ್ ಸರ್ಕಾರ: ಆರ್‌. ಅಶೋಕ್‌ ಕಿಡಿ

ಲೋಕಸಭೆ ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ತೈಲ ದರವನ್ನು ಏರಿಕೆ (Petrol Diesel Price) ಮಾಡಿದೆ. ಈ ಮೂಲಕ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ. ಹಾಲಿನ ದರ, ಆಲ್ಕೋಹಾಲ್ ದರ, ಸ್ಟಾಂಪ್ ಡ್ಯೂಟಿ, ಮಾರ್ಗಸೂಚಿ ದರ, ವಿದ್ಯುತ್ ದರ ಹಾಗೂ ಈಗ ತೈಲ ಬೆಲೆ ಏರಿಕೆ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ರೂಪಾಯಿ ಬೆಲೆ ಏರಿಕೆಯಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಕೂಟರ್ ಶವ ಯಾತ್ರೆ ಮಾಡಿದ್ದರು.‌ 15 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಜನರ ಮೇಲೆ ಸೇಡು ತೀರಿಸಿಕೊಳ್ಳಲು ದರ ಏರಿಸಿದ್ದಾರೆ ಎಂದರು.

ಗ್ಯಾರಂಟಿಗಾಗಿ 55,000 ಕೋಟಿ ರೂ. ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ. ಆದ್ದರಿಂದ ಜನರ ಮೇಲೆ 3-4 ಸಾವಿರ ಕೋಟಿ ರೂ‌. ಹೊರೆ ಹಾಕಿ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಗೂ ದರ ಏರಲಿದೆ. ನಾಳೆಯಿಂದಲೇ ಆಟೋ ರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ ಎಂದರು.

ಕಳ್ಳ ದಾರಿ ಮೂಲಕ ಸೇಡು

ನ್ಯಾಯವಾಗಿ ಮಾಡುವುದಿದ್ದರೆ ಬಜೆಟ್‌ನಲ್ಲಿ ಸರ್ಕಾರ ತೈಲ ದರ ಏರಿಸಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತಿದ್ದರಿಂದ ನಂತರ ಕಳ್ಳ ದಾರಿಯಿಂದ ದರ ಏರಿಸಿ ಜನರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಸಂಸತ್ತಿನಲ್ಲಿ 100 ಸೀಟು ಪಡೆಯಲಾಗದ ಕಾಂಗ್ರೆಸ್ ಪೆಟ್ರೋಲ್ ದರವನ್ನು 100 ರೂಪಾಯಿಗೂ ಹೆಚ್ಚು ಮಾಡಿದೆ. ರಾಹುಲ್ ಗಾಂಧಿ ಹೇಳಿದಂತೆ ಟಕಾಟಕ್ ಎಂದು ತೈಲ ದರ ಏರಿಸಿದ್ದಾರೆ ಎಂದು ದೂರಿದರು.

ಜನರು ಮತ ನೀಡಿಲ್ಲ ಎಂಬ ಕಾರಣಕ್ಕೆ ಸರ್ಕಾರ ದರ ಏರಿಸಿದೆ. ಹಿಂದೆ ಬಿಜೆಪಿ ಸರ್ಕಾರ 7 ರೂ. ಕಡಿಮೆ ಮಾಡಿತ್ತು. ಕಾಂಗ್ರೆಸ್ ಗೆ ಮಾನವಿದ್ದರೆ ದರ ಏರಿಕೆ ವಾಪಾಸ್ ಪಡೆಯಲಿ ಎಂದು ಆಗ್ರಹಿಸಿದರು.

ಆಸ್ತಿ ಮಾರಾಟ

ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರ ಬಿಡಿಎ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿಯ ಆಸ್ತಿಗಳನ್ನು ಕೂಡ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಶಿಸ್ತನ್ನು ಸರ್ವನಾಶ ಮಾಡಿದ್ದಾರೆ. ಇನ್ನೂ ಒಂದು ವರ್ಷದಲ್ಲಿ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ ಎಂದರು.

ಸರ್ಕಾರಿ ನೌಕರರು ಮತ ನೀಡಿಲ್ಲವೆಂಬ ಕಾರಣಕ್ಕೆ ವೇತನ ಹೆಚ್ಚಿಸಿಲ್ಲ. 7 ನೇ ವೇತನ ಆಯೋಗದ ವರದಿ ಜಾರಿ ‘ನಾಳೆ ಬಾ’ ಎಂಬ ಸ್ಥಿತಿಗೆ ಬಂದಿದೆ. 143 ಶಾಸಕರ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿದೆ. ಅದಕ್ಕಾಗಿ ತೈಲ ದರ ಏರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕರು ಕೂಡ ಬೇಸರಗೊಂಡಿದ್ದಾರೆ‌. ಜಿಲ್ಲಾ ಪಂಚಾಯತ್ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version