Site icon Vistara News

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

Power cut off due to a technical problem in the transformer Bengaluru faces water crisis today

ಬೆಂಗಳೂರು: ಇಂದು ಗುರುವಾರ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ (Water supply) ಎದುರಾಗಲಿದೆ. ನಿನ್ನೆ ಬುಧವಾರ ಸುರಿದ ಮಳೆಗೆ ಹಾರೋಹಳ್ಳಿ ಹಾಗೂ ಟಿ.ಕೆ ಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಆಗಿದೆ. ಟ್ರಾನ್ಸಫಾರ್ಮರ್‌ಗಳಲ್ಲಿ ತಾಂತ್ರಿಕ ಸಮಸ್ಯೆ, ವಿದ್ಯುತ್ ಸಂಪರ್ಕ ಕಡಿತ ಉಂಟಾಗಿದೆ. ಹೀಗಾಗಿ ಪಂಪಿಂಗ್ ಸ್ಟೇಷನ್‌ಗಳಿಗೆ ವಿದ್ಯುತ್ ಸಂಪರ್ಕ‌ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಇಲ್ಲದೆ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಕೆಪಿಟಿಸಿಎಲ್ ಕಡೆಯಿಂದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ ಮರುಸ್ಥಾಪನೆಯವರೆಗೂ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.

ಬೆಸ್ಕಾಂ ಆನ್‌ಲೈನ್‌ ಸೇವೆ ಸ್ಥಗಿತ!

ಅಕ್ಟೋಬರ್ 5, 6ಕ್ಕೆ ಬೆಸ್ಕಾಂ ಸಾಫ್ಟ್‌ವೇರ್‌ ಉನ್ನತೀಕರಣ ಹಿನ್ನೆಲೆಯಲ್ಲಿ ಆನ್‌ಲೈನ್‌ ಸೇವೆ ಅಲಭ್ಯವಾಗಿರಲಿದೆ. ಅಕ್ಟೋಬರ್ 4ರ ರಾತ್ರಿ 9 ರಿಂದ 7ರ ಬೆಳಗ್ಗೆ 6 ಗಂಟೆವರೆಗೂ ಅಪ್ಲಿಕೇಶನ್‌ ಡೌನ್‌ಟೈಮ್ ನಿಗದಿ ಮಾಡಲಾಗಿದೆ. ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎನ್ನಲಾಗಿದೆ. ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯಕ್ಕೆ ಮುಂದಾಗಿದೆ.

ಸ್ಥಗಿತದ ಸಮಯದಲ್ಲಿ ಈ ಸೇವೆಗಳು ಅಲಭ್ಯ:

-ಹೊಸ ಸಂಪರ್ಕಗಳ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆಗಳು, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ ‘ಆರ್‌ಎಪಿಡಿಆರ್‌ಪಿ’ ಅಪ್ಲಿಕೇಶನ್‌ ಲಭ್ಯವಿರುವುದಿಲ್ಲ.

-ಬೆಸ್ಕಾಂ ಕ್ಯಾಶ್ ಕೌಂಟರ್‌ಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.

-ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಲಭ್ಯವಿರುವುದಿಲ್ಲ.

-ಗ್ರಾಹಕ ಪೋರ್ಟಲ್ ಮತ್ತು ಥರ್ಡ್ ಪಾರ್ಟಿ ಪಾವತಿ ಚಾನಲ್‌ಗಳ ಮೂಲಕ ಆನ್‌ಲೈನ್ ಬಿಲ್ ಪಾವತಿಗಳು ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 5ರ ಬೆಳಗ್ಗೆ 11ರವರೆಗೆ ಲಭ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ಬಿಲ್ ಪಾವತಿ ಕಾರ್ಯವನ್ನು ಮಾತ್ರ ಪುನರಾರಂಭಿಸಲಾಗುತ್ತದೆ.

-ಆರ್‌ಎಪಿಡಿಆರ್‌ಪಿ’ ಸೇವೆ ಇಲ್ಲದ ಕಾರಣ, ಮೊಬೈಲ್ ಅಪ್ಲಿಕೇಶನ್‌ಗಳ‌ ಸೇವೆಯೂ ಅಲಭ್ಯ.

-ಡಬ್ಲ್ಯುಎಎಂಎಸ್ ಮೂಲಕ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ.

    ಯಾವ ನಗರಗಳಲ್ಲಿ ಆನ್‌ಲೈನ್ ಸೇವೆ ಇರುವುದಿಲ್ಲ?

    ಬೆಸ್ಕಾಂ: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು,ತಿಪಟೂರು ಹಾಗೂ ಗೌರಿಬಿದನೂರು.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Exit mobile version