ಬೆಂಗಳೂರು: ನಗರದ ಜೈನ್ ವಿಶ್ವವಿದ್ಯಾಲಯದ (JAIN (Deemed-to-be University)) ಸೆಂಟರ್ ಫಾರ್ ಎಜುಕೇಶನಲ್ ಟ್ರಾನ್ಸ್‌ಫರ್ಮೇಶನ್ ಥ್ರೋ ಟೆಕ್ನಾಲಜಿ (CETT) ಸಂಸ್ಥೆಯಲ್ಲಿ ಮಾರ್ಚ್ 1 ಮತ್ತು 2ರಂದು ʼThe Myriad Facets of Women : ಎ ಸೆಲೆಬ್ರೇಷನ್ ಆಫ್ ದಿ ಎಕ್ಸ್‌ಟ್ರಾರ್ಡಿನರಿʼ ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು.
ಮಹಿಳಾ ಸಬಲೀಕರಣ ಮತ್ತು ಆತ್ಮವಿಶ್ವಾಸ ನಿರ್ಮಾಣ, ಕಲೆ ಮತ್ತು ವೈದಿಕ ಸಂಸ್ಕೃತಿ, ಸುಸ್ಥಿರ ಅಭಿವೃದ್ಧಿ, ಕ್ರೀಡೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ, ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ರೋಲ್ ಮಾಡೆಲ್‌ಗಳು, ನೆಟ್‌ವರ್ಕಿಂಗ್ ಮತ್ತು ಸಹಯೋಗ ಮತ್ತು ಇತರ ವಿಷಯಗಳ ಕುರಿತು ಸಂಶೋಧನಾ ಪ್ರಬಂಧ ಪ್ರಸ್ತುತಿಗಳ ಮೂಲಕ ಚರ್ಚಿಸುವುದು ಈ ಸಮ್ಮೇಳನದ ಹಿಂದಿನ ಮುಖ್ಯ ಉದ್ದೇಶವಾಗಿತ್ತು.
ಮುಖ್ಯ ಅತಿಥಿಗಳಾದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು, ಮೊದಲಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯʼ ಹಾರ್ದಿಕ ಶುಭಾಶಯಗಳನ್ನು ಕೋರಿ, ಶಿಕ್ಷಣದ ಪರಿವರ್ತನಾ ಶಕ್ತಿ ಬಗ್ಗೆ ಮಾತನಾಡಿದರು. ವಿದ್ಯಾವಂತ ಮಹಿಳೆಯರು ವಿದ್ಯೆ ಬಿಟ್ಟು ಮದುವೆಯಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಅಂದಿನ ಡೈರಿ ಕೆಲಸಕ್ಕೆ ಮಹಿಳೆಯರ ಐತಿಹಾಸಿಕ ಸಂಪರ್ಕವನ್ನು ಮತ್ತು ಇಂದಿನ ಕಾರ್ಪೊರೇಟ್ ಸಮಾಜದ ಜವಾಬ್ದಾರಿ ಹೊತ್ತುಕೊಂಡ ಅವರ ಪರಿವರ್ತನೆಯ ಬಗ್ಗೆ ಮಾತನಾಡಿದರು.
ಮಹಿಳಾ ಸಬಲೀಕರಣ ಪ್ರತಿಯೊಬ್ಬರ ಕರ್ತವ್ಯ. ಸ್ತ್ರೀಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಮಹಿಳಾ ಸಮಾನತೆಗೆ ಒತ್ತು ನೀಡಬೇಕು. ಸವಾಲುಗಳನ್ನು ಜಯಿಸುವುದು ಮತ್ತು ಜೀವನದ ವಿವಿಧ ಅಂಶಗಳಲ್ಲಿ ಅಭಿವೃದ್ಧಿ ಹೊಂದುವ ಅಗತ್ಯವಿದೆ ಎಂದು ಡಾ.ಸುಧಾಕರ್ ಹೇಳಿದರು.
ಇನ್ನು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಅವರು, ಅತ್ಯುತ್ತಮ ಸಾರ್ವಜನಿಕ ಸೇವೆಗಾಗಿ ಐಪಿಎಸ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದರು. ಡಾ.ಧರಣಿದೇವಿ ಮಾಲಗತ್ತಿ ಅವರು ಕಲೆ ಮತ್ತು ಸಂಸ್ಕೃತಿಯಲ್ಲಿ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾದರು. ರುಕ್ಮಿಣಿ ಕೃಷ್ಣಸ್ವಾಮಿ ವಿಶೇಷ ಶಿಕ್ಷಣದಲ್ಲಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, ನಳಿನಿ ಶೇಖರ್ ಅವರಿಗೆ ಪರಿಸರ ಸುಸ್ಥಿರತೆಯಲ್ಲಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಎಂಎಸ್ ವಿದ್ಯಾ ಸಾಗರ್ ಅವರಿಗೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದ್ದು, ಡಾ. ಪ್ರಭಾ ಚಂದ್ರ ಅವರು ಮಾನಸಿಕ ಯೋಗಕ್ಷೇಮದಲ್ಲಿ ನಿಮ್ಹಾನ್ಸ್ ಎಕ್ಸಲೆನ್ಸ್ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟರು. ಎಂಎಸ್ ನಬಿಲಾ ಜಮಾಲ್ ಅವರಿಗೆ ಮಾಧ್ಯಮದಲ್ಲಿ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಯಿತು.
ಮಂಗಳಾ ಎನ್. ಸಂಚಾರಿ ಅವರಿಗೆ ಕಲೆ ಮತ್ತು ರಂಗಭೂಮಿಯಲ್ಲಿ ಎಕ್ಸಲೆನ್ಸ್ ಪ್ರಶಸ್ತಿ, ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೆ ಕ್ರೀಡೆಯಲ್ಲಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ. ಆಶಾ ವಿ. ಸ್ವಾಮಿ ಅವರಿಗೆ ಸಮಾಜ ಸೇವೆಯಲ್ಲಿ ಎಕ್ಸಲೆನ್ಸ್ ಪ್ರಶಸ್ತಿ ಮತ್ತು ಡಾ. ಶ್ವೇತಾ ಸಿಂಗ್ ಅವರು ಉದ್ಯಮಶೀಲತೆಯಲ್ಲಿ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ | Raja Marga Column : ಪೋಷಕರೇ, ಮಕ್ಕಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ
ಅಂತಿಮವಾಗಿ, ಪ್ರೊ. ನಿಲೋಫರ್ ಖಾನ್ ಅವರು ಉನ್ನತ ಶಿಕ್ಷಣದಲ್ಲಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟರು. ಅಲ್ಲದೆ, ಸಮ್ಮೇಳನದಲ್ಲಿ ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಂದ 412 ಕ್ಕೂ ಹೆಚ್ಚು (Research Paper Presentations) ಸಂಶೋಧನಾ ಪ್ರಬಂಧವನ್ನು ಮಂಡಿಸಿಲಾಯಿತು.